ವಿಜಯಪುರ : ನಗರದ ಹೊರವಲಯದ ಮಹಾತ್ಮಾ ಗಾಂಧಿ ಕಾಲೋನಿಯಲ್ಲಿ ಕುಷ್ಠರೋಗಕ್ಕೆ ತುತ್ತಾದ ರೋಗಿಗಳಿಗೆ ವಾಸ ಹಾಗೂ ಆರೈಕೆ ಮಾಡಲು ಸರ್ಕಾರದಿಂದ ಬಡವಾಣೆ ನಿರ್ಮಿಸಲಾಗಿದೆ. ಆದ್ರೆ, ಕುಷ್ಠರೋಗಕ್ಕೆ ತುತ್ತಾಗಿ ಈ ಬಡವಾಣೆಯಲ್ಲಿ ವಾಸ ಮಾಡುತ್ತಿರುವ ಜನರ ಬದುಕು ಕಷ್ಟಮಯವಾಗಿದೆ.
ಈ ಕಾಲೋನಿಯಲ್ಲಿ ಸುಮಾರು 30ಕ್ಕೂ ಅಧಿಕ ವೃದ್ಧರು ಕುಷ್ಠರೋಗದಿಂದ ವಾಸಿಯಾಗಿದ್ದಾರೆ. ಆದ್ರೆ, ಸರ್ಕಾರ ನಿರ್ಮಿಸಿರುವ ಈ ಮನೆಗಳಲ್ಲಿ ಕೆಲವು ವೃದ್ಧರನ್ನ ನೋಡಿಕೊಳ್ಳಲು ಸಂಬಂಧಿಕರು ಇಲ್ಲದೆ ಪರದಾಡುವಂತಾಗಿದೆ. ನಮಗೆ ಮನೆಯಿಂದ ಹೊರ ಬರಲು ಆಗ್ತಿಲ್ಲ. ನಮ್ಮನ್ನ ಆರೈಕೆ ಮಾಡುವವರಿಲ್ಲ.
ಕಷ್ಟಗಳ ಕೇಳುವವರೇ ಇಲ್ಲ. ಯಾವ ಹಬ್ಬ ಬಂದ್ರೂ ಅದು ನಮಗೆ ಅನ್ವಯಿಸುವುದಿಲ್ಲ ಎಂದು ವೃದ್ಧರೊಬ್ಬರು ತಿಳಿಸಿದ್ದಾರೆ. ಕಲಬುರ್ಗಿ, ಬಾಗಲಕೋಟೆ, ಗದಗ ಸೇರಿ ಕುಷ್ಠರೋಗಕ್ಕೆ ತುತ್ತಾದ ಜನರು ಈ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದಾರೆ. ಸ್ವಲ್ಪ ಮಳೆ ಬಂದ್ರೂ ವೃದ್ಧರು ವಾಸವಿರುವ ಮನೆಗಳು ಸೋರುತ್ತಿವೆ. ಕಾಲಕ್ರಮೇಣ ಅಂಗವೈಕಲ್ಯತೆ ವಕ್ಕರಿಸಿ, 30ಕ್ಕೂ ಅಧಿಕ ವೃದ್ಧರ ಜೀವನವನ್ನೇ ಕುಷ್ಠರೋಗ ಬರ್ಬಾದ್ ಮಾಡಿದೆ.
ಸಂಜೆಯಾದ್ರೆ ಮಹಾತ್ಮಾ ಕಾಲೋನಿಯಲ್ಲಿ ಬೀದಿ ದೀಪದ ವ್ಯವಸ್ಥೆಯಿಲ್ಲದಿರುವುದರಿಂದ ಚಿಕಿತ್ಸೆಗೆ ಬರುವ ವೈದ್ಯರು ಕೂಡ ಸರಿಯಾಗಿ ಚಿಕಿತ್ಸೆ ನೀಡುವುದಿಲ್ಲ. ಮುಖ್ಯವಾಗಿ ನುರಿತ ತಜ್ಞರೇ ಬಡವಾಣೆಗೆ ಬಂದು ಆರೋಗ್ಯ ವಿಚಾರಣೆ ಮಾಡುತ್ತಿಲ್ಲ ಎಂದು ವೃದ್ಧರು ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೂ 64 ವೃದ್ಧರು ಕುಷ್ಠರೋಗದಿಂದ ಹೊರ ಬಂದಿದ್ದಾರೆ. 26 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯಕೀಯ ಸೇವೆ ಹಾಗೂ ನಮ್ಮ ವ್ಯಾಪ್ತಿಗೆ ಬರುವ ಎಲ್ಲ ಸೇವೆಗಳು ಮಹಾತ್ಮಾ ಗಾಂಧಿ ಕಾಲೋನಿಯಲ್ಲಿ ನೀಡಲಾಗುತ್ತಿದೆ. ವೈದ್ಯರು ಕೂಡ ಚಿಕಿತ್ಸೆ ನೀಡಲು ಪ್ರತಿವಾರ ಹೋಗ್ತಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳುತ್ತಿದ್ದಾರೆ.