ವಿಜಯಪುರ: ಬಹುಮತ ಕಳೆದುಕೊಂಡಿರುವ ಸಮ್ಮಿಶ್ರ ಸರ್ಕಾರ ತಕ್ಷಣ ಅಧಿಕಾರ ಬಿಟ್ಟು ಇಳಿಯಬೇಕು ಎಂದು ಜಿಲ್ಲಾ ಬಿಜೆಪಿ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಬಸವೇಶ್ವರ ವೃತ್ತದ ಬಳಿ ಜಮಾಯಿಸಿದ ಬಿಜೆಪಿ ಮುಖಂಡರು, ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ತಕ್ಷಣ ಸರ್ಕಾರ ವಜಾಗೊಳಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಕೆಟ್ಟ ಆಡಳಿತ ನಡೆಸಿದೆ. ಇದರ ಪರಿಣಾಮ ಕಾಂಗ್ರೆಸ್-ಜೆಡಿಎಸ್ ಶಾಸಕರು ಬೇಸತ್ತು ರಾಜೀನಾಮೆ ನೀಡಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ನೈತಿಕ ಹೊಣೆ ಹೊತ್ತು ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.