ವಿಜಯಪುರ/ಬೆಂಗಳೂರು: ವಾಯವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ವಿರುದ್ಧ ಹಣ ಹಂಚಿಕೆ ಆರೋಪ ಕೇಳಿಬಂದಿದೆ. ಮಹಾರಾಷ್ಟ್ರ ಪಾಸಿಂಗ್ ಇರುವ ಕಾರಿನಲ್ಲಿ ಹತ್ತು ಸಾವಿರದಂತೆ ಪ್ಯಾಕೆಟ್ನಲ್ಲಿ ಹಣವಿಟ್ಟು ಹಂಚುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಆರೋಪಿಸಿದ್ದಾರೆ.
ಅಲ್ಲದೆ, ಪೊಲೀಸರು ಹಾಗೂ ಚುನಾವಣಾ ಸಿಬ್ಬಂದಿ ವಾಹನವನ್ನು ಸೀಜ್ ಮಾಡಿದ್ದು, ಅದರಲ್ಲಿ 17,40,000 ಲಕ್ಷ ರೂ. ದಸ್ತಗಿರಿಯಾಗಿದೆ. ಹೀಗಾಗಿ ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅರುಣ ಶಹಾಪುರ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನ್ನಮ್ಮನವರಗೆ ದೂರು ಸಲ್ಲಿಸಿದ್ದಾರೆ.
ಇದೊಂದೆ ವಾಹನ ಅಲ್ಲದೆ ಇನ್ನೂ ಹದಿನಾಲ್ಕು ಕಾರುಗಳು ಹೀಗೆ ಓಡಾಡುತ್ತಿವೆ ಎಂದು ಆರೋಪಿಸಿರುವ ಶಹಾಪುರ, ಸೋಲಿನ ಹತಾಶೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಣ ಹಂಚುವ ಕೆಲಸ ಮಾಡ್ತಿದ್ದಾರೆ. ಚುನಾವಣಾ ಅಧಿಕಾರಿಗಳು ಇದೆಲ್ಲವನ್ನೂ ತಪಾಸಣೆ ಮಾಡಿ, ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಿರುವಂತೆ ನಗರದ ಗೋದಾವರಿ ಹೋಟೆಲ್ ಬಳಿ ಕಾಂಗ್ರೆಸ್ ಅಭ್ಯರ್ಥಿಯ ನಾಲ್ವರು ಬೆಂಬಲಿಗರು ಕರಪತ್ರ ಹಿಡಿದು ಮತದಾರರಿಗೆ ಮತ ಹಾಕಲು ಹಣದ ಆಮಿಷವೊಡ್ಡಿದ್ದಾರೆ ಎಂದು ದೂರಿದ್ದಾರೆ.
ರವಿಕುಮಾರ್ ಆಗ್ರಹ: ಹಣ ಹಂಚಿ ಮತದಾರರಿಗೆ ಆಮಿಷವೊಡ್ಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಕಾಂಗ್ರೆಸ್ ಪಕ್ಷದ ವಾಯವ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಅವರನ್ನು ಚುನಾವಣಾ ಕಣದಿಂದ ವಜಾಗೊಳಿಸುವಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಅವರು ಸೋಲಿನ ಭೀತಿಯಿಂದ ಕ್ಷೇತ್ರದ ಶಿಕ್ಷಕರ ಮತದಾರರಿಗೆ ಹಣ ಹಂಚುತ್ತಿದ್ದು, ಇಂದು ವಿಜಯಪುರದಲ್ಲಿ ಕಾರಿನಲ್ಲಿ ಹಣ ಹಂಚಿಕೆ ಮಾಡುವಾಗ ಸುಮಾರು 17.40 ಲಕ್ಷ ಹಣ ಹಾಗೂ ಮತದಾರರ ಬ್ಯಾಲೆಟ್ ಪೇಪರ್ ಸಿಕ್ಕಿಬಿದ್ದಿದೆ. ಇವರನ್ನು ಕೂಡಲೇ ಚುನಾವಣಾ ಕಣದಿಂದ ವಜಾಗೊಳಿಸಬೇಕೆಂದು ರವಿಕುಮಾರ್ ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ವಾಯವ್ಯ ಶಿಕ್ಷಕ ಕ್ಷೇತ್ರ: ತ್ರಿಕೋನ ಸ್ಪರ್ಧೆಗೆ ವೇದಿಕೆಯಾದ ಚುನಾವಣಾ ಕಣ