ವಿಜಯಪುರ: ನಗರದ ದರಬಾರ ಹೈಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ನಡೆದ ಎಸ್ಎಸ್ಎಲ್ಸಿ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ಕೆಲ ವಿದ್ಯಾರ್ಥಿಗಳಿಗೆ ಹಳೇ ಪ್ರಶ್ನೆ ಪತ್ರಿಕೆ ನೀಡಿರುವ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಿಇಒ ಶರೀಫ್ ನದಾಫ್, ತಹಶೀಲ್ದಾರ್ ಮೋಹನ ಕುಮಾರಿ ಭೇಟಿ ನೀಡಿ ಪರೀಕ್ಷೆ ಮೇಲ್ವಿಚಾರಕರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ವಿಚಾರಣೆ ನಡೆಸಿದರು. ಪರೀಕ್ಷಾ ಕೇಂದ್ರದ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ ತಹಶೀಲ್ದಾರ್ ಮೋಹನ ಕುಮಾರಿ, ಫ್ರೆಶರ್ಸ್ ವಿದ್ಯಾರ್ಥಿಗಳಿಗೆ ರಿಪಿಟರ್ಸ್ ಪ್ರಶ್ನೆ ಪತ್ರಿಕೆ ಕೊಟ್ಟಿರುವುದು ಗಮನಕ್ಕೆ ಬಂದಿದೆ. ಪ್ರಶ್ನೆ ಪತ್ರಿಕೆ ವಿತರಿಸುವಲ್ಲಿ ಸಮಸ್ಯೆಯಾಗಿದ್ದು ಕಂಡು ಬಂದಿದೆ. ಈ ಕುರಿತು ಬಿಇಒ ತನಿಖೆ ನಡೆಸುತ್ತಿದ್ದಾರೆ. ಬಿಇಒ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಪರೀಕ್ಷೆ ಮುಗಿದ ಮೇಲೆ ಅಧಿಕಾರಿಗಳಿಗೆ ತಮ್ಮ ತಪ್ಪಿನ ಅರಿವಾದ ತಕ್ಷಣ ವಿದ್ಯಾರ್ಥಿಗಳನ್ನ ಕರೆಯಿಸಿ, ಮತ್ತೊಮ್ಮೆ ಪರೀಕ್ಷೆ ಬರೆಸಲಾಗಿದೆ. ಪರೀಕ್ಷೆ ಮುಗಿದ ಮೇಲೆ 1 ಗಂಟೆಯೊಳಗೆ ಉತ್ತರ ಪತ್ರಿಕೆಗಳನ್ನು ಸಂಬಂಧಪಟ್ಟ ಇಲಾಖೆಗೆ ಒಪ್ಪಿಸಬೇಕಾಗಿತ್ತು. ಆದರೆ ಹೆಚ್ಚುವರಿ ಎರಡು ಗಂಟೆಯಾದರೂ ಉತ್ತರ ಪತ್ರಿಕೆ ಕೈ ಸೇರದ ಹಿನ್ನೆಲೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಕೆಲ ವಿದ್ಯಾರ್ಥಿಗಳಿಗೆ ತಾವು ಹಳೇ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆದಿದ್ದೇವೆ ಎನ್ನುವುದು ತಡವಾಗಿ ಅರಿವಾಗಿ, ಪೋಷಕರ ಜೊತೆ ಪರೀಕ್ಷಾ ಕೇಂದ್ರಕ್ಕೆ ಬಂದು ಮತ್ತೊಮ್ಮೆ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ.