ವಿಜಯಪುರ : ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಅಗತ್ಯ ದಾಖಲೆಗಳನ್ಮು ಸಂಗ್ರಹಿಸಿ ಲೋಕಾಯುಕ್ತಕ್ಕೆ ಲಿಖಿತ ದೂರು ನೀಡಲಾಗಿದೆ. ಇಬ್ಬರು ಅಧಿಕಾರಿಗಳನ್ನು ಏಪ್ರಿಲ್ 27ರಂದು ವಿಚಾರಣೆ ಎದುರಿಸಲು ಹಾಜರಾಗುವಂತೆ ಲೋಕಾಯುಕ್ತರು ನೋಟಿಸ್ ನೀಡಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಸನ್ನಿ ಗವಿಮಠ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸನ್ನಿ ಗವಿಮಠ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆ ಲೆಕ್ಕ ತನಿಖಾ ವರದಿಯಲ್ಲಿ ಅನೇಕ ನ್ಯೂನತೆಗಳಿವೆ. ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ ಪ್ರತಿ ವರ್ಷ ನಡೆಸುವ ಆಡಿಟ್ ರಿರ್ಪೋಟ್‌ನಲ್ಲಿಯೂ ಸಾಕಷ್ಟು ದೋಷಗಳಿವೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತ ನ್ಯಾಯಮೂರ್ತಿ ಎಸ್.ಎಸ್.ಪಾಟೀಲರಿಗೆ ಮನವಿ ನೀಡಲಾಗಿತ್ತು. ಇದೀಗ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿರುವುದು ಸಂತಸ ತಂದಿದೆ ಎಂದರು.
ನಗರಾಭಿವೃದ್ದಿ ಪ್ರಾಧಿಕಾರದಲ್ಲಿ 2018ರಲ್ಲಿ ಹರಾಜು ಮಾಡಿರುವ ಸಿಎ ನಿವೇಶನಗಳಿವೆ. ಸರ್ಕಾರಿ ಬಿಡ್ ಬಿಟ್ಟು ಕಡಿಮೆ ಅವಧಿಯಲ್ಲಿ ನಿವೇಶನ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ ನಿರೀಕ್ಷಿತ ಆದಾಯ ಬಂದಿಲ್ಲ. ಹೀಗಾಗಿ ಅಕ್ರಮದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ದೂರು ದಾಖಲಿಸಲಾಗಿದೆ.
ಮಹಾನಗರ ಪಾಲಿಕೆ ಆರಂಭವಾದಾಗಿನಿಂದ ಇಲ್ಲಿವರೆಗೆ ಅಂದರೆ 1947-48ರಿಂದ 2016-17 ಸಾಲಿನವರೆಗೆ ಲೆಕ್ಕ ಪರಿಶೋಧನಾ ವರದಿಗಳಿಗೆ ಅನುಸರಣೆಯೇ ಆಗಿಲ್ಲ. ಒಟ್ಟು 3497 ಕಾಮಗಾರಿಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಮೊತ್ತವೇ 92. 60ಕೋಟಿ ರೂ. ಮೊತ್ತ ಬಾಕಿ ಇದೆ. ಇದರ ಜತೆಗೆ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿಯೂ 5.92 ಕೋಟಿ ರೂ. ಆಕ್ಷೇಪಣಾ ಮೊತ್ತ ಬಾಕಿದೆ. ವಸೂಲಾತಿ ಸಹ 16 ಕೋಟಿಯಷ್ಟಿದೆ. ಒಂದೇ ತೆರನಾದ ಕಾಮಗಾರಿ ನಡೆಯಬಾರದು ಎಂದು ಕಾನೂನು ಇದ್ದರೂ ಅದನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಇದಲ್ಲದೇ ಆಕ್ಷೇಪಣಾ ಮೊತ್ತವನ್ನು ನಿವೇಶನ ಮಾರಾಟ ಮಾಡಿದ ಮೇಲೆ 90 ದಿನದಲ್ಲಿ ವಸೂಲಿ ಮಾಡಬೇಕು ಎಂಬ ನಿಯಮವಿದೆ. ಅಧಿಕಾರಿಗಳು ನಿಯಮ ಗಾಳಿಗೆ ತೂರಿ ವಸೂಲಾತಿ ಮಾಡಿಲ್ಲ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಗವಿಮಠ ಹೇಳಿದರು.
ಇದನ್ನೂ ಓದಿ : ವಿಜಯಪುರ: ಬದುಕಿರುವಾಗಲೇ ವೃದ್ಧೆಗೆ ಮರಣ ಪ್ರಮಾಣಪತ್ರ ನೀಡಿದ್ರಾ ಅಧಿಕಾರಿಗಳು?