ವಿಜಯಪುರ: ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ.
ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹದ್ದೂರ್ ಶಾಸ್ತ್ರಿ (ಆಲಮಟ್ಟಿ) ಸಾಗರದ ಹೊರ ಹರಿವು ಎರಡು ದಿನಗಳ ನಂತರ ಹೆಚ್ಚಿಸಲಾಗಿದೆ. ಒಳಹರಿವು ನಿರಂತರವಾಗಿ 1ಲಕ್ಷ ಕ್ಯೂಸೆಕ್ನಷ್ಟು ಹೆಚ್ಚಳವಾಗಿದ್ದರೂ ಕಳೆದ ಎರಡು ದಿನ ಕೇವಲ 39,000 ಕ್ಯುಸೆಕ್ ನೀರು ಹೊರಹರಿವು ರೂಪದಲ್ಲಿ ಬಿಡಲಾಗುತ್ತಿತ್ತು. ಬುಧವಾರ ಸಂಜೆ ಜಲಾಶಯದಿಂದ 1,29 ಲಕ್ಷ ಕ್ಯುಸೆಕ್ ನೀರು ಹರಿಬಿಡಲಾಗಿದೆ.
123.081 ಟಿಎಂಸಿ ನೀರು ಸಂಗ್ರಹವಿರುವ ಜಲಾಶಯದಲ್ಲಿ ಬುಧವಾರ ಸಂಜೆ 7 ಗಂಟೆಯವರೆಗೆ 115 ಟಿಎಂಸಿ ನೀರು ಸಂಗ್ರಹವಾಗಿದೆ. ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗಲು ದಿನಗಣನೆ ಆರಂಭವಾಗಿದೆ.
ಬೆಳಗ್ಗೆ 112.294 ಟಿಎಂಸಿ ಸಂಗ್ರಹವಿತ್ತು. 2 ಟಿಎಂಸಿಯಷ್ಟು ಹೆಚ್ಚುವರಿ ಸಂಜೆಯವರೆಗೆ ಸಂಗ್ರಹವಾಗಿದೆ. ಜಲಾಶಯದ ಗರಿಷ್ಟ ನೀರಿನ ಮಟ್ಟ 519.60 ಮೀಟರ್ ಆಗಿದ್ದು, ಇಂದು ಸಂಜೆಯವರೆಗೆ 519.20 ಮೀಟರ್ ಸಂಗ್ರಹವಾಗಿ, ಇನ್ನೂ ಜಲಾಶಯ ಭರ್ತಿಗೆ ಅರ್ಧ ಮೀಟರ್ನಷ್ಟು ಬಾಕಿ ಉಳಿದಿದೆ.