ವಿಜಯಪುರ: ಕೊರೊನಾದಿಂದ ಮುಂದೂಡಲ್ಪಟ್ಟಿದ್ದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವವು ಸೆ.19ರಂದು ಆಯೋಜಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಆನ್ ಲೈನ್ನಲ್ಲಿ ಘಟಿಕೋತ್ಸವ ನಡೆಯಲಿದೆ ಎಂದು ವಿವಿಯ ಹಂಗಾಮಿ ಕುಲಪತಿ ಪ್ರೊ. ಓಂಕಾರ ಕಾಕಡೆ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹಂಗಾಮಿ ಕುಲಪತಿ ಡಾ. ಓಂಕಾರ ಕಾಕಡೆ, ಮಹಿಳಾ ವಿವಿ ಜ್ಞಾನ ಶಕ್ತಿ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಪಿಹೆಚ್ಡಿ ಹಾಗೂ ವಿವಿಧ ಪದವಿಯಲ್ಲಿ ಚಿನ್ನದ ಪದಕ ಗಳಿಸಿರುವ ವಿದ್ಯಾರ್ಥಿನಿಯರಿಗೆ ಆಹ್ವಾನ ನೀಡಲಾಗಿದೆ ಹಾಗೂ ಈ ಬಾರಿಯ ಘಟಿಕೋತ್ಸವದಲ್ಲಿ ನವದೆಹಲಿಯ ಅನುದಾನದ ಆಯೋಗದ ಸದಸ್ಯ ಎಂ.ಕೆ. ಶ್ರೀಧರ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.
ಈ ಬಾರಿ ಒಟ್ಟು 55 ಪಿಹೆಚ್ಡಿ, 67 ವಿದ್ಯಾರ್ಥಿನಿಯರಿಗೆ 70 ಚಿನ್ನದ ಪದಕ ಹಾಗೂ 8,230 ವಿದ್ಯಾರ್ಥಿನಿಯರಿಗೆ ಸ್ನಾತಕ ಪದವಿ ಹಾಗೂ 1,087 ವಿದ್ಯಾರ್ಥಿನಿಯರಿಗೆ ಸ್ನಾತಕೋತ್ತರ ಪದವಿ ಹಾಗೂ 54 ವಿದ್ಯಾರ್ಥಿನಿಯರು ಪಿಜಿ ಡಿಪ್ಲೋಮಾ ಪದವಿ ನೀಡಿ ಗೌರವಿಸಲಾಗುವುದು. ಘಟಿಕೋತ್ಸವವನ್ನು ಅಕ್ಕ ಟಿವಿ ಯೂಟ್ಯೂಬ್ ನ್ಯೂಸ್ ಚಾನೆಲ್ ಲಿಂಕ್ ಹಾಗೂ ಫೇಸ್ ಬುಕ್ ಮೂಲಕ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಸಮಾರಂಭಕ್ಜೆ ಆಗಮಿಸುವ ಅತಿಥಿಗಳು, ಆಹ್ವಾನಿತ ವಿದ್ಯಾರ್ಥಿನಿಯರು ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಬೇಕು ಎಂದು ಮನವಿ ಮಾಡಿದರು.
ಈ ಬಾರಿ ಯಾವ ಮಹಿಳಾ ಸಾಧಕಿಗೂ ಗೌರವ ಡಾಕ್ಟರೇಟ್ ನೀಡದಿರಲು ನಿರ್ಧರಿಸಲಾಗಿದೆ. ಮಹಿಳಾ ಸಾಧಕಿಯರ ಹೆಸರು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲಾಗಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಸೂಚನೆ ಬರದಿರುವ ಹಿನ್ನೆಲೆಯಲ್ಲಿ ಗೌರವ ಡಾಕ್ಟರೇಟ್ ಹೆಸರು ಅಂತಿಮಗೊಂಡಿಲ್ಲ. ಅದಕ್ಕಾಗಿ ಡಾಕ್ಟರೇಟ್ ನೀಡದಿರಲು ನಿರ್ಧರಿಸಲಾಗಿದೆ ಎಂದು ಕಂಗಾಮಿ ಕುಲಪತಿಗಳು ಸ್ಪಷ್ಟಪಡಿಸಿದ್ದಾರೆ.