ವಿಜಯಪುರ: ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ 13 ಮತ್ತು 14ನೇ ಘಟಿಕೋತ್ಸವ ಉದ್ಘಾಟಿಸಿದ ರಾಜ್ಯಪಾಲ ಹಾಗೂ ಕುಲಾಧಿಪತಿಗಳಾದ ಥಾವರ್ಚಂದ್ ಗೆಹ್ಲೋಟ್ ಮಹಿಳಾ ಸಬಲೀಕರಣದ ಆಶಯ ಮಹಿಳಾ ವಿಶ್ವವಿದ್ಯಾಲಯದ ಮೂಲಕ ಈಡೇರುತ್ತಿದೆ ಎಂದು ಹೇಳಿದರು.
ಇಲ್ಲಿಯ ಗುಣಮಟ್ಟದ ಶಿಕ್ಷಣ ಮಹಿಳಾ ಶಿಕ್ಷಣದಲ್ಲಿ ಪ್ರಮುಖ ಪಾತ್ರವಹಿಸಲಿ ಐಶ್ಚರ್ಯಕ್ಕಾಗಿ ಲಕ್ಷ್ಮಿ, ವಿದ್ಯೆಗಾಗಿ ಸರಸ್ವತಿ, ಶಕ್ತಿಗಾಗಿ ದುರ್ಗಾ ಮಾತೆಯರನ್ನು ಪೂಜಿಸುತ್ತಾರೆ ಹಾಗೆ ಮಹಿಳಾ ಶಕ್ತಿಯನ್ನು ರೂಪಿಸುವ ತಾಣ ಮಹಿಳಾ ವಿವಿಯಾಗಿದೆ ಮಹಿಳಾ ಸಶಕ್ತಿಕರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಆ ಎಲ್ಲಾ ಯೋಜನೆಗಳು ಅರ್ಹ ಮಹಿಳೆಯರಿಗೆ ಸಿಗಬೇಕಿದೆ ಎಂದು ಚಿನ್ನದ ಪದಕ ಪಡೆದ ಪಿಎಚ್ಡಿ ವಿದ್ಯಾರ್ಥಿನಿಯರಿಗೆ ಅಭಿನಂದನೆ ಸಲ್ಲಿಸಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಭವಿಷ್ಯದ ಪೀಳಿಗೆಗೆ ಉತ್ತಮ ಶಿಕ್ಷಣ ನೀಡಲಿದೆ ಉಜ್ವಲ ಭವಿಷ್ಯ ಕಟ್ಟಿಕೊಡಲಿದೆ. ವಿಜಯಪುರದ ಮಹಿಳಾ ವಿವಿ ದೇಶದ ಅತ್ಯುತ್ತಮ ವಿವಿಗಳಲ್ಲಿ ಒಂದಾಗ ಬೇಕೆಂದು ಆಶಯ ವ್ಯಕ್ತಪಡಿಸಿದರು.
ಗೌರವ ಡಾಕ್ಟರೇಟ್ ಪ್ರದಾನ: ಸಾಮಾಜಿಕ ಸೇವೆಯಲ್ಲಿ ಸಾಧನೆ ಮಾಡಿದ ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಡಾ. ಎಸ್.ಜಿ.ಸುಶೀಲಮ್ಮ ಹಾಗೂ ಬೀದರ್ ಗುರುನಾನಕ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದರು. ಗುಜರಾತ್ ಪುನರುತ್ಥಾನ ವಿದ್ಯಾಪೀಠದ ಇಂದುಮತಿ ಕಟಾರೆ ಅನಿವಾರ್ಯ ಕಾರಣದಿಂದ ಗೌರವ ಡಾಕ್ಟರೇಟ್ ಪ್ರಧಾನ ಸಮಾರಂಭದಲ್ಲಿ ಗೈರಾಗಿದ್ದರು.
ಈ ಭಾರಿ ಘಟಿಕೋತ್ಸವದಲ್ಲಿ ಒಟ್ಟು 167 ವಿದ್ಯಾರ್ಥಿಗಳಿಗೆ 202 ಚಿನ್ನದ ಪದಕ, 23,911 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ, 55 ವಿದ್ಯಾರ್ಥಿನಿಯರಿಗೆ ಪಿಹೆಚ್‌ಡಿ ಚಿನ್ನದ ಪದಕ ಹಾಗೂ ಪ್ರಮಾಣ ಪತ್ರ ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಲಾಯಿತು.
ಎಂ.ಎ ಕನ್ನಡ ವಿಭಾಗದಿಂದ ರೇಷ್ಮಾ ವಾಲಿ, ಸವಿತಾ ಕುಲಕರ್ಣಿ ತಲಾ 4 ಚಿನ್ನದ ಪದಕ ಪಡೆದುಕೊಂಡರು, ಎಂಬಿಎ ವಿಭಾಗದಿಂದ ಮುಕ್ತಾಂಕ ಹಿರೇಮಠ, ಎಂಪಿಎಡ್ ವಿಭಾಗದಿಂದ ಭುವನೇಶ್ವರಿ ಅಂಬಣ್ಣ, ಎಂಎಸ್ಸಿ ಆಹಾರ ಸಂಸ್ಕರಣ ವಿಭಾಗದಿಂದ ಮುಬಸಿರಿನಾ ಇನಾಮದಾರ ತಲಾ 3 ಚಿನ್ನದ ಪದಕವನ್ನು ಪಡೆದಿದ್ದಾರೆ.
ವರ್ಕ್ ಫ್ರಂ ಹೋಮ್ ಕೆಲಸದ ಜೊತೆ ಎಂಬಿಎ: ಪುಣೆಯ ಟಿಸಿಎನ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮುಕ್ತಾಂಕ ಹಿರೇಮಠ್, ರಾತ್ರಿ ವರ್ಕ್ ಫ್ರಂ ಹೋಮ್ ಕೆಲಸ ಮಾಡಿ, ಬೆಳಗ್ಗೆ ಎಂಬಿಎ ಅಭ್ಯಸಿಸಿ ಚಿನ್ನದ ಪದಕ ಪಡೆದಿದ್ದಾರೆ, ಎಂಪಿಎಡ್ ನಲ್ಲಿ 3 ಚಿನ್ನದ ಪದಕ ಗಳಿಸಿದ ಭುವನೇಶ್ವರಿ ತನ್ನ ಪೋಷಕರು ನೀಡಿದ ಬೆಂಬಲ ನೆನಪಿಸಿ ಕಣ್ಣೀರು ಹಾಕಿದರು.
ಇದನ್ನೂ ಓದಿ: ನ್ಯೂಸ್ ಪೇಪರ್ ಆಫ್ ಕರ್ನಾಟಕ ವತಿಯಿಂದ 67 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ