ವಿಜಯಪುರ: ರಾಜ್ಯದ ಹಲವೆಡೆ ಮಳೆಯಿಲ್ಲದೇ ಬರ ಪರಿಸ್ಥಿತಿ ಎದುರಾಗಿದ್ದು, ನದಿ ಹಾಗೂ ಕೆರೆಗಳು ಬತ್ತಿ ಹೋಗಿವೆ. ಬಿಸಿಲ ಬೇಗೆಯಿಂದ ತತ್ತರಿಸಿದ್ದ ಹಲವೆಡೆ ಮುಂಗಾರು ಪೂರ್ವ ಮಳೆ ರೈತಾಪಿ ವರ್ಗಕ್ಕೆ ಕೊಂಚ ನಿರಾಳ ತಂದಿದೆ. ಈ ಮಳೆಯಿಂದ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಕೃಷಿ ಚಟುವಟಿಕೆ ಕಾರ್ಯಗಳು ಚುರುಕುಗೊಂಡಿದ್ದು, ರೈತರ ಪಾಲಿಗೆ ಅದೃಷ್ಟದ ಬೆಳೆಗಳಾದ ಹೆಸರು, ತೊಗರಿ, ಹತ್ತಿ ಬಿತ್ತನೆಗೆ ರೈತರು ಮುಂದಾಗಿದ್ದಾರೆ.
ಕಳೆದ ಬಾರಿ ಬಿತ್ತನೆ ಬೀಜಗಳು ಸರ್ಕಾರದಿಂದ ಸಮರ್ಪಕವಾಗಿ ಪೂರೈಕೆ ಆಗಿರಲಿಲ್ಲ. ಜೊತೆಗೆ ಮಳೆಯೂ ಕೈಕೊಟ್ಟಿತ್ತು. ಆದರೆ, ಈ ಬಾರಿ ಅಧಿಕ ಪ್ರಮಾಣದಲ್ಲಿ ಮಳೆ ಬಿದ್ದಿದ್ದು, ಸರ್ಕಾರವೂ ಕೂಡ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ಪೂರೈಕೆ ಮಾಡಿದೆ. ಈಗಾಗಲೇ ತೊಗರಿ, ಹೆಸರು, ಸಜ್ಜೆ ರೈತ ಸಂಪರ್ಕ ಕೇಂದ್ರಕ್ಕೆ ತಲುಪಿವೆ. ಸರ್ಕಾರ ನಿಗದಿಪಡಿಸಿರುವ ದರಕ್ಕೆ ಬಿತ್ತನೆ ಬೀಜಗಳನ್ನು ರೈತರು ಖರೀದಿಸುತ್ತಿದ್ದಾರೆ. ಯಾವುದೇ ಬೀಜದ ಕೊರತೆ ಕಂಡು ಬರುವುದಿಲ್ಲ ಎಂದು ಮುದ್ದೇಬಿಹಾಳ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸುಭಾಸ್ ಮೂಕಿಹಾಳ ಮಾಹಿತಿ ನೀಡಿದರು.