ವಿಜಯಪುರ: ಆಯುರ್ವೇದ ಪದ್ಧತಿ ಅಳವಡಿಸಿಕೊಂಡವರು ಕೊರೊನಾ ಸೋಂಕಿಗೆ ಭಯಪಡುವಂತಿಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಜಿಲ್ಲಾ ಪಂಚಾಯಿತಿ ಸಂಭಾಂಗಣದಲ್ಲಿ ಕೊವಿಡ್ 19 ಮುನ್ನೆಚ್ಚರಿಕೆ ಕ್ರಮ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಕಳೆದ ಮೂರು ತಿಂಗಳ ನನ್ನ ಜೀವನ ಶೈಲಿ ಬದಲಾಯಿಸಿಕೊಂಡಿದ್ದೇನೆ. ಚಹಾ ಕುಡಿಯುವುದು ಬಿಟ್ಟಿದ್ದೇನೆ. ನಿತ್ಯ ಬಿಸಿ ನೀರು, ನಿಂಬೆಹಣ್ಣು, ಅರಿಶಿಣ ಮಿಶ್ರಿತ ಕಾಡೆ (ಆಯುರ್ವೇದ ಬಿಸಿ ದ್ರವ) ಸೇವನೆ ಮಾಡಿದ್ದೇನೆ ಎನ್ನುತ್ತಾ ಕೊರೊನಾ ತಡೆಗೆ ಜೀವನ ಶೈಲಿ ಬದಲಾವಣೆ ಅವಶ್ಯ ಎಂದರು.
ನಾವು ಕೊರೊನಾದೊಂದಿಗೆ ಬದುಕುವುದನ್ನು ಕಲಿಯಬೇಕು. ಇದು ಕೂಡ ಮುಂದೊಂದು ದಿನ ನೆಗಡಿ, ಜ್ವರದಂತೆ ಬಂದು ಹೋಗುವಂತಹ ರೋಗವಾಗಲಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಅದರೊಂದಿಗೆ ಬದುಕುವುದ ಕಲಿತರೆ ಏನೂ ಸಮಸ್ಯೆ ಆಗುವುದಿಲ್ಲ. ಕೊರೊನಾದಿಂದ ಭಾರತೀಯರಿಗೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ವಿದೇಶಿಗರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರವುದರಿಂದ ಅಲ್ಲಿ ಸಾವು, ನೋವುಗಳು ಹೆಚ್ಚು ಸಂಭವಿಸುತ್ತಿವೆ ಎಂದರು.
ಹಿರಿಯರು ಈ ಮೊದಲು ನೆಗಡಿ, ಜ್ವರ ಬಂದರೆ ಕಾಡೆ (ವನಸ್ಪತಿ ಔಷಧಿ) ಕುಡಿರಿ ಎನ್ನುತ್ತಿದ್ದರು. ಅದನ್ನ ಕುಡಿಯುವ ಪದ್ಧತಿ ಮತ್ತೆ ಇದೀಗ ಮರುಕಳಿಸಿದೆ. ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ತುಳಸಿ, ಅರಿಶಿಣ, ಶುಂಠಿ, ದಾಲ್ಚಿನ್ನಿ ಮುಂತಾದ ಆಯುರ್ವೇದ ಔಷಧ ಪದಾರ್ಥಗಳನ್ನು ಸೇವಿಸಬೇಕು ಎಂದು ಸಲಹೆ ನೀಡಿದರು.