ವಿಜಯಪುರ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕುರಿತು ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಜತೆ ಎಡಿಜಿಪಿ ಅಲೋಕ್ ಕುಮಾರ ಮಹತ್ವದ ಸಭೆ ನಡೆಸಿದರು. ಮಧ್ಯಾಹ್ನ ಗುಲಬುರ್ಗಾ ಮೂಲಕ ಜಿಲ್ಲೆಯ ಭೀಮಾತೀರದ ಚಡಚಣ ಪಟ್ಟಣಕ್ಕೆ ಆಗಮಿಸಿದ ಅವರು, ಹೊಸ ಪ್ರವಾಸ ಮಂದಿರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಮುಖ್ಯವಾಗಿ ಮುಂಬರುವ ಚುನಾವಣೆಯಲ್ಲಿ ಅಪರಾಧ ಚಟುವಟಿಕೆ, ಹಣ ಹಂಚಲು ತಡೆಯಲು ಕೈಗೊಳ್ಳ ಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದರು. ಮುಖ್ಯವಾಗಿ ಭೀಮಾತೀರದಲ್ಲಿ ಸದ್ಯ ರೌಡಿ ಶೀಟರ್ಗಳ ಪಟ್ಟಿ ಹಾಗೂ ಗಡಿಪಾರಾದ ಆರೋಪಿಗಳು ಇತ್ತೀಚಿಗೆ ನಡೆಸಿದ ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸಿದರು.
ಚಲನವಲನಗಳ ಮೇಲೆ ನಿಗಾ ವಹಿಸುವಂತೆ ಸೂಚನೆ: ಅವರ ಚಲನವಲನಗಳ ಮೇಲೆ ನಿಗಾ ವಹಿಸಿ ಮೊದಲೇ ಅವರನ್ನು ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಬೇಕು ಎಂದು ಎಡಿಜಿಪಿ ಅಲೋಕ್ ಕುಮಾರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದರು ಎಂದು ತಿಳಿದು ಬಂದಿದೆ. ಸಭೆಯಲ್ಲಿ ಬೆಳಗಾವಿ ಉತ್ತರ ವಲಯ ಐಜಿಪಿ ಸತೀಶ ಕುಮಾರ, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ, ಹೆಚ್ಚುವರಿ ಎಸ್ಪಿ ಸೇರಿದಂತೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಯಲ್ಲಿ ಪಿಎಸ್ಐ, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ ಮಾತನಾಡಿ, ಇಲ್ಲಿಗೆ ಪ್ರಭಾರಿಯಾಗಿ ನೇಮಕವಾದಾಗಲೇ ಎಡಿಜಿಪಿ ಅಲೋಕ್ ಕುಮಾರ್ ಅವರು ಭೀಮಾತೀರ ಎಂಬ ಅಪಕೀರ್ತಿಯನ್ನು ಅಳಿಸಿಹಾಕಬೇಕು. ಜಗಜ್ಯೋತಿ ಬಸವಣ್ಣ ಅವರು ಹುಟ್ಟಿದ ಈ ಭೂಮಿಯ ಭೀಮಾ ತೀರದ ಹಂತಕರು ಎಂದು ಸಂಭೋದಿಸುವುದನ್ನು ತೆಗೆದುಹಾಕುವಂತೆ ಮಾಡಬೇಕು ಎಂದು ಆದೇಶ ನೀಡಿದ್ದರು. ಅದಕ್ಕಾಗಿ ಅವರೇ ಸ್ವತಃ ಇಲ್ಲಿಗೆ ಬಂದು ಸಭೆಗಳನ್ನು ಮಾಡಿದ್ದರು. ಮೂರನೇ ಬಾರಿಗೆ ಬಂದು ಈ ಬಗ್ಗೆ ಚುನಾವಣೆಗೂ ಮುನ್ನ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸಭೆ ಮಾಡಿದ್ದಾರೆ ಎಂದು ತಿಳಿಸಿದರು.
ಭೀಮಾತೀರದ ಕುಖ್ಯಾತಿ ಹೊಡೆದು ಹಾಕಲು ಮುಂದಾದ ಎಡಿಜಿಪಿ: ಭೀಮಾತೀರದಲ್ಲಿ ಹಲವು ದಶಕಗಳಿಂದ ನಡೆಯುತ್ತಿರುವ ಬೈರಗೊಂಡ ಹಾಗೂ ಚಡಚಣ ಕುಟುಂಬದ ದ್ವೇಷ ಕೊನೆಗೊಳಿಸಲು ಎಡಿಜಿಪಿ ಅಲೋಕ್ ಕುಮಾರ ಬೆಳಗಾವಿ ಐಜಿಪಿ ಇದ್ದಾಗಿನಿಂದಲೂ ಪ್ರಯತ್ನಿಸುತ್ತಿದ್ದಾರೆ. ಎಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲು ಬಾರಿ ಚಡಚಣಕ್ಕೆ ಭೇಟಿ ನೀಡಿದ್ದರು. ಮಹಾದೇವ ಸಾಹುಕಾರ ಬೈರಗೊಂಡ ಹಾಗೂ ಚಡಚಣ ಕುಟುಂಬದ ಬೆಂಬಲಿಗರ ಜತೆ ಮಾತುಕತೆ ನಡೆಸಿ ಇನ್ನೊಮ್ಮೆ ಭೀಮಾತೀರದಲ್ಲಿ ರಕ್ತಸಿಕ್ತ ಅಧ್ಯಾಯ ಆರಂಭವಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ ಹೋಗಿದ್ದರು.
ಮೂರನೇ ಬಾರಿ ಚಡಚಣ ಠಾಣೆಗೆ ಭೇಟಿ ನೀಡಿದ ಎಡಿಜಿಪಿ: ಅದಾದ ನಂತರ ಝಳಕಿ ಐಬಿಯಲ್ಲಿ ಎರಡು ಬಾರಿ ಭೀಮಾತೀರದ ಹಂತಕ ಕುಟುಂಬದವನ್ನು ಕರೆಯಿಸಿ ಖಡಕ್ ವಾರ್ನಿಂಗ್ ನೀಡಿದ್ದರು. ಇಂದು ಮೂರನೇ ಬಾರಿ ಚಡಚಣಕ್ಕೆ ಎಡಿಜಿಪಿ ಅಲೋಕ್‌ಕುಮಾರ್ ಆಗಮಿಸಿದರು. ಅಧಿಕಾರಿಗಳ ಸಭೆ ನಡೆಸಿ ಚಡಚಣ ಠಾಣೆಗೆ ತೆರಳಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾದರು. ಗ್ರಾಮಸ್ಥರನ್ನು ಅವರನ್ನು ಡೊಳ್ಳು ಕುಣಿತ ಮೂಲಕ ಭರ್ಜರಿಯಾಗಿ ಸ್ವಾಗತಿಸಿದರು. ನಂತರ ಭೀಮಾತೀರದ ಎರಡು ಗ್ಯಾಂಗ್‌ಗಳ ಸಂಧಾನ ಸಭೆಯನ್ನು ಎಡಿಜಿಪಿ ನಡೆಸಲಿದ್ದಾರೆ. ಬೈರಗೊಂಡ ಹಾಗೂ ಚಡಚಣ ಗ್ಯಾಂಗ್‌ಗಳ ನಡುವೆ ರಾಜೀ ಸಂಧಾನಕ್ಕೆ ಎಡಿಜಿಪಿ ಮುಂದಾಗಿದ್ದಾರೆ.
ಇದನ್ನೂ ಓದಿ: ಭೀಮಾ ತೀರದ ನಟೋರಿಯಸ್ ಚಡಚಣ ಸಹೋದರರ ಹತ್ಯೆ ಆರೋಪಿಗಳ ಜಾಮೀನು ಅರ್ಜಿ ವಜಾ