ವಿಜಯಪುರ: ಆಕಸ್ಮಿಕ ಅಗ್ನಿ ದುರಂತದಿಂದ ಮನೆಯೊಂದು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಉತ್ನಾಳ್ ಗ್ರಾಮದಲ್ಲಿ ನಡೆದಿದೆ.
ಹನುಮಂತ ಭೀಮಪ್ಪ ಭಜಂತ್ರಿ ಎಂಬುವರ ಮನೆ ಬೆಂಕಿಗಾಹುತಿಯಾಗಿದೆ. ಘಟನೆಯಲ್ಲಿ ಮನೆಯಲ್ಲಿದ್ದ ಒಂದು ಲಕ್ಷ ರೂಪಾಯಿ ನಗದು, 25 ಕ್ವಿಂಟಾಲ್ ಧವಸ ಧಾನ್ಯ ಎರಡು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ. ನಾಲ್ಕು ಕುರಿಗಳು, ಎರಡು ಮೇಕೆಗಳು ಸಜೀವ ದಹನವಾಗಿವೆ. ಜೊತೆಗೆ ಮನೆಯಲ್ಲಿದ್ದ ಇತರೆ ವಸ್ತುಗಳು, ಪ್ರಮುಖ ದಾಖಲೆ ಪತ್ರಗಳು ನಾಶವಾಗಿವೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ನಡೆದಿದ್ದು, ಭಾರಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.