ಮುದ್ದೇಬಿಹಾಳ: ಗುಡಿಸಲಿಗೆ ಆಕಸ್ಮಿಕ ಬೆಂಕಿ ಬಿದ್ದು ಐದು ಲಕ್ಷ ರೂ. ನಗದು ಹಣ, 50 ಗ್ರಾಂ ಚಿನ್ನಾಭರಣ ಸೇರಿದಂತೆ ದಿನಬಳಕೆ ಸಾಮಗ್ರಿಗಳು ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ನಾಗಬೇನಾಳ ತಾಂಡಾ ಸಮೀಪದ ನಾರಾಯಣಪೂರ ಚೆಕ್‌ಪೋಸ್ಟ್ ಬಳಿ ನಡೆದಿದೆ.
ಚೆಕ್ ಪೋಸ್ಟ ಹತ್ತಿರ ರಿ.ಸ.ನಂ 89ರಲ್ಲಿ ಬರುವ ಯಮನಪ್ಪ ರಾಮಪ್ಪ ಲಮಾಣಿಯವರ ಜಮೀನಿನಲ್ಲಿ ಅವರ ಸಂಬಂಧಿಕ ಖೇಮಪ್ಪ ಪಾಂಡಪ್ಪ ಲಮಾಣಿ ಎಂಬುವರು ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಗುಡಿಸಲಿಗೆ ಬೆಂಕಿ ಬೀಳುತ್ತಲೇ ಸಣ್ಣಪುಟ್ಟ ಮಕ್ಕಳು ತಕ್ಷಣ ಮನೆಯಿಂದ ಹೊರಗೆ ಬಂದಿದ್ದಾರೆ. ಬೆಂಕಿಯ ತೀವ್ರತೆಗೆ ಟ್ರಂಕ್‌ನಲ್ಲಿ ಸಾಲಗಾರರಿಗೆಂದು ತಂದಿಟ್ಟುಕೊಂಡಿದ್ದ ಐದು ಲಕ್ಷ ರೂ.ನಗದು ಹಣ ಸುಟ್ಟು ಹೋಗಿದೆ. ಅಲ್ಲದೆ 50 ಗ್ರಾಂ ಚಿನ್ನಾಭರಣ,100 ಗ್ರಾಂ ಬೆಳ್ಳಿ, ಎಲ್‌ಐಸಿ ಬಾಂಡ್‌ಗಳು, ದಾಖಲಾತಿಗಳು,ಆಹಾರ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ.
ಗುಡಿಸಲಿನ ಪಕ್ಕದಲ್ಲಿದ್ದ ಕುರಿಯ ಶೆಡ್ಡಿಗೂ ಬೆಂಕಿ ಬಿದ್ದು ಸುಟ್ಟಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ನಾಗಬೇನಾಳ ಗ್ರಾಮ ಲೆಕ್ಕಾಧಿಕಾರಿ ಹರ್ಷಿತ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್ ಸಿಬ್ಬಂದಿ ಪಿ.ಎಸ್. ಪಾಟೀಲ್, ರವಿ ವಿಜಯಪುರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಬಿಕ್ಕಿ ಬಿಕ್ಕಿ ಅತ್ತ ಮಹಿಳೆ : ಗುಡಿಸಲು ತನ್ನೆದುರಿಗೆ ಸುಟ್ಟು ಹೋಗುತ್ತಿದ್ದರೂ ಅದನ್ನು ನಂದಿಸಲಾಗದೇ ಮಹಿಳೆ ಕುಸಿದು ಬಿದ್ದರು. ಮಕ್ಕಳ ದಾಖಲಾತಿ, ದುಡಿದ ಹಣ ಕಣ್ಣ ಮುಂದೆ ಸುಟ್ಟು ಭಸ್ಮವಾಗುತ್ತಿರುವುದನ್ನ ನೋಡುತ್ತ ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಮನಕಲಕುವಂತಿತ್ತು. ಅಗ್ನಿಶಾಮಕ ವಾಹನ ಬರುವಷ್ಟರಲ್ಲಿಯೇ ದುರಂತ ನಡೆದು ಹೋಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.
ಮಾನವೀಯತೆ ಮೆರೆದ ಗ್ರಾಮ ಲೆಕ್ಕಾಧಿಕಾರಿ: ಗ್ರಾಮಲೆಕ್ಕಾಧಿಕಾರಿ ಹರ್ಷಿತಗೌಡ ವೈಯಕ್ತಿಕವಾಗಿ ಐದು ಸಾವಿರ ರೂ.ಗಳನ್ನು ಸಂತ್ರಸ್ತ ಖೇಮಪ್ಪ ಲಮಾಣಿ ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದರು.