ವಿಜಯಪುರ : ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ನಮ್ಮ ಮೈತ್ರಿ ಅಭ್ಯರ್ಥಿ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಅದನ್ನು ನಾಲ್ಕು ಗೋಡೆ ಮಧ್ಯ ಸ್ವಾಮಿಗಳು ಕುಳಿತುಕೊಂಡು ಮಾಡುವರಿದ್ದಾರೆ. ಹೀಗಾಗಿ ಇಲ್ಲಿ ಜಾತಿ, ಧರ್ಮ, ನೋಡದೆ ಜನರು ನಮ್ಮ ಅಭ್ಯರ್ಥಿಯನ್ನು ಆರಿಸಿ ತರಲಿದ್ದಾರೆ ಎಂದು ಪಶುಸಂಗೋಪನಾ ಸಚಿವ ವೆಂಕಟರಾಮ್ ನಾಡಗೌಡ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮುದ್ದೇಬಿಹಾಳ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸುನೀತಾ ಚವಾಣ್ ಚುನಾವಣಾ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ ಅವರು, ಈಗಾಗಲೇ ಈ ಜಿಲ್ಲೆಯಲ್ಲಿ ಎಂಪಿ ಇದ್ದಾರೆ, ಆದರೆ ಅವರು ಯಾವುದೇ ಕೆಲಸ ಮಾಡಿಲ್ಲ. ಬರೀ ಮೋದಿ ನೋಡಿ ಓಟು ಕೊಡಿ ಎಂದು ಹೇಳುತ್ತಾರೆ. ಆದರೆ ರಸ್ತೆ ಸರಿಯಾಗಿ ಮಾಡಿಲ್ಲ. ನೀರು ಸಿಗಲಿಲ್ಲ ಎಂದು ನಾವೇನು ಮೋದಿಗೆ ಹೋಗಿ ಕೇಳಬೇಕಾ. ಅದು ಈ ಭಾಗದಲ್ಲಿರುವ ಎಂಪಿ ಮಾಡ್ಬೇಕಾಗುತ್ತೆ ಎಂದು ಕಿಡಿಕಾರಿದರು.
ಹೀಗಾಗಿ ನಮ್ಮ ಮೈತ್ರಿ ಅಭ್ಯರ್ಥಿ ಸುನೀತಾ ಚವಾಣ ಅವರನ್ನು ಆರಿಸಿ ತರಲು ಜನರು ಸನ್ನದ್ಧರಾಗಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು. ಇನ್ನು ಎರಡು ಪಕ್ಷದಲ್ಲಿ ಕೆಲವು ಭಿನ್ನಾಭಿಪ್ರಾಯಗಳಿದ್ದು, ಅವುಗಳನೆಲ್ಲಾ ಬದಿಗಿಟ್ಟು ಎರಡು ಪಕ್ಷದ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಸುನೀತಾ ಚವಾಣ ಅವರನ್ನು ಗೆಲ್ಲಿಸುವ ಕಾರ್ಯ ಆರಂಭಿಸಬೇಕು ಎಂದು ಜಂಟಿ ಕಾರ್ಯಕರ್ತರಿಗೆ ಸೂಚಿಸಿದರು.
ಇದೇ ವೇಳೆ ಮೋದಿ ವಿರುದ್ಧ ಕಿಡಿಕಾರಿದ ಅವರು ಮೋದಿ ಸಬಕಾ ಸಾಥ್ ಸಬಕಾ ವಿಕಾಸ್ ಅಂತ ಹೇಳುತ್ತಾರೆ, ಆದರೆ ಈವರೆಗೂ ಯಾರು ವಿಕಾಸ ಆಗಿಲ್ಲ. ಬಡವರು ಬಡವರಾಗಿಯೇ ಇದ್ದಾರೆ ಎಂದು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾಜಿ ಸಚಿವ ಸಿ.ಎಸ್. ನಾಡಗೌಡ್, ಶೃಂಗಾರ ಗೌಡ, ನಾವದಗಿ ವಕೀಲ್ , ದೇಸಾಯಿ ರಸೂಲ್ ಅವರು ಸೇರಿದಂತೆ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.