ವಿಜಯಪುರ : 2018ರ ವಿಧಾನಸಭೆ ಅಸ್ಥಿತ್ವಕ್ಕೆ ಬಂದು ಎರಡು ವರ್ಷಗಳು ಕಳೆದಿವೆ. ಆದರೆ, ರಾಜಕೀಯ ಕಚ್ಚಾಟದಿಂದ ವಿಧಾನಸಭೆ ಕ್ಷೇತ್ರಗಳು ಅಭಿವೃದ್ದಿ ಕಂಡಿಲ್ಲ. ಒಂದೆಡೆ ಶಾಸಕರಿಗೆ ಪ್ರತಿ ವರ್ಷ ನೀಡುವ ವಿವೇಚನಾ ನಿಧಿ ಸರಿಯಾಗಿ ಬಳಕೆಯಾಗಿಲ್ಲ ಎಂಬ ಆರೋಪವಿದೆ. ಮತ್ತೊಂಡೆದೆ ಬಿಡುಗಡೆಯಾದ ಅನುದಾನ ದೊರೆಯುತ್ತಿಲ್ಲ ಎನ್ನುವ ಕೊರಗಿದೆ.
ಜಿಲ್ಲೆಯ 8 ವಿಧಾನಸಭೆ ಹಾಗೂ ವಿಧಾನ ಪರಿಷತ್ನ ಇಬ್ಬರು ಸದಸ್ಯರಿಗೆ ದೊರೆತಿರುವ ವಿವೇಚನಾ ನಿಧಿ (ಎಂಎಲ್ಎ ಫಂಡ್) ಎಷ್ಟು ಬಂದಿದೆ. ಅದರಲ್ಲಿ ಖರ್ಚಾದ ನಿಧಿಯಷ್ಟು, ನಿಧಿ ಪಡೆಯಲು ಶಾಸಕರು ಅನುಭವಿಸುತ್ತಿರುವ ತೊಂದರೆ ಕುರಿತು ಈಟಿವಿ ಭಾರತ ಸಿದ್ಧಪಡಿಸಿರುವ ವರದಿ ಇಲ್ಲಿದೆ. ಪ್ರತಿಪಕ್ಷದ ಶಾಸಕರನ್ನು ಹೊರತುಪಡಿಸಿ ಅನುದಾನ ಸರಿಯಾಗಿ ನೀಡಿಲ್ಲ. ಕೇವಲ ಆಡಳಿತ ಪಕ್ಷದ ಶಾಸಕರಿಗೆ ಮಾತ್ರ ಭರ್ಜರಿ ಅನುದಾನ ದೊರೆತಿದೆ. ಪ್ರತಿಪಕ್ಷಗಳ ಶಾಸಕರು ಆರಂಭಿಸಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾಗಿದ್ದ ಅನುದಾನ ವಾಪಸ್ ಪಡೆಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಪ್ರತಿ ಶಾಸಕನಿಗೂ ಪ್ರತಿವರ್ಷ ₹2 ಕೋಟಿ ಅನುದಾನ ಕಾಯ್ದಿರಿಸಲಾಗಿದೆ. ಆದರೆ, ಶಾಸಕರಿಗೂ ಪೂರ್ಣ ಪ್ರಮಾಣದ ನಿಧಿ ದೊರೆತಿಲ್ಲ. ಶಾಸಕರ ನಿಧಿ ಹಂಚುವ ಅಧಿಕಾರ ಜಿಲ್ಲಾಧಿಕಾರಿ ಬದಲು ಉಪವಿಭಾಗಾಧಿಕಾರಿಗೆ ನೀಡಲಾಗಿದೆ. ಹೀಗಾಗಿ, ಶಾಸಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಜಿಲ್ಲಾಧಿಕಾರಿಗಳು ಈ ಸಮಸ್ಯೆ ಒಪ್ಪುತ್ತಿದ್ದಾರೆ. ಶಾಸಕರು ಅನುದಾನವನ್ನು ಡಿಸಿ ಮೂಲಕ ಪಡೆಯಲು ಲಿಖಿತ ಪತ್ರ ನೀಡಿದರೆ ಅದನ್ನು ಪರಿಗಣಿಸಲಾಗುವುದು ಎಂದಿದ್ದಾರೆ.
2018-19ನೇ ಸಾಲಿನಲ್ಲಿ ಶಾಸಕರಿಗೆ ಮತ್ತು ಎಂಎಲ್ಸಿಗೆ ತಲಾ ₹161 ಲಕ್ಷ ಹಾಗೂ 2019ರಲ್ಲಿ ಆಯ್ಕೆಯಾದ ಎಂಎಲ್ಸಿಗೆ ₹111 ಲಕ್ಷ ಅನುದಾನ ಬಿಡುಗಡೆಯಾಗಿದೆ. ಎಲ್ಲರೂ ₹1 ಕೋಟಿ ಅನುದಾನದೊಳಗೆ ಖರ್ಚು ಮಾಡಿದ್ದಾರೆ. ಅವರಲ್ಲಿ ಬಬಲೇಶ್ವರ ಶಾಸಕ ಎಂ ಬಿ ಪಾಟೀಲ ಅತಿ ಕಡಿಮೆ (₹57.30 ಲಕ್ಷ) ಹಾಗೂ ನಾಗಠಾಣ ಶಾಸಕ ದೇವಾನಂದ ಚೌಹಾಣ್ ಅತಿ ಹೆಚ್ಚು (99.07 ಲಕ್ಷ) ಖರ್ಚು ಮಾಡಿದ್ದಾರೆ.
2019-20ರಲ್ಲಿ ಜನಪ್ರತಿನಿಧಿಗಳಿಗೆ ತಲಾ ₹61 ಲಕ್ಷ ಬಿಡುಗಡೆಯಾಗಿದೆ. ಹಿಂದಿನ ವರ್ಷದ ಬಾಕಿ ಅನುದಾನ ಸೇರಿಸಿ ಯಾರೂ ಪೂರ್ಣ ಅನುದಾನ ಈವರೆಗೂ ಖರ್ಚು ಮಾಡಿಲ್ಲ. ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ಬಳಕೆಯಾಗದ ಅನುದಾನ ₹75 ಸಾವಿರ, ಅತಿ ಹೆಚ್ಚು ಮುದ್ದೇಬಿಹಾಳ ಕ್ಷೇತ್ರ ಶಾಸಕರು ₹161 ಲಕ್ಷ ಬಾಕಿ ಉಳಿಸಿದ್ದಾರೆ. ಅದಕ್ಕೆ ಮುಖ್ಯವಾಗಿ ಅನುದಾನ ಹಂಚಿಕೆ ಮಾಡಬೇಕಾದ ಅಧಿಕಾರಿಗಳ ಗೊಂದಲ ಹಾಗೂ ಸರ್ಕಾರದ ವಿಳಂಬ ನೀತಿ ಕಾರಣವೆಂದು ಜನಪ್ರತಿನಿಧಿಗಳು ಆರೋಪಿಸಿದ್ದಾರೆ.