ವಿಜಯಪುರ : ಇಂಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಭಾರತಿ ಹಿಟ್ನಳ್ಳಿ, ಮದುವೆಯಾದ 15 ದಿನಗಳಲ್ಲೇ ಸೇವೆಗೆ ವಾಪಸಾಗಿ ರೋಗಿಗಳ ಮೇಲೆ ತಮಗಿರುವ ಪ್ರೀತಿ ಹಾಗೂ ಕೆಲಸದ ಮೇಲಿನ ಶ್ರದ್ಧೆ ಸಾಬೀತು ಪಡಿಸಿದ್ದಾರೆ.
ಓದಿ: ಕೋವಿಡ್ ಸಂಕಷ್ಟ ಕಾಲಕ್ಕೆ ರಿಯಲ್ ಹಿರೋಗಳಾದ ಸಿನಿ ತಾರೆಯರು: ಇವರೇ ಆ 'ಆಪತ್ಬಾಂಧವರು'
ಸೇನೆಗೆ ಮಕ್ಕಳು ಸೇರುತ್ತಾರೆಂದರೆ ಹಿಂದೆ ಪೋಷಕರು ಚಿಂತೆ ಮಾಡುತ್ತಿದ್ದರು. ಈಗಲೂ ಅಂಥದ್ದೇ ಸ್ಥಿತಿ ಎದುರಾಗಿದೆ. ಕೊರೊನಾ ಸೇನಾನಿ ಆಗಿ ಕೆಲಸ ಮಾಡುವ ಅವಕಾಶ ಲಭಿಸಿದೆ. ನೀನು ನಮ್ಮ ಸೇವೆಗಿಂತಲೂ ಕೊರೊನಾ ಪೀಡಿತರ ಸೇವೆ ಮಾಡು,
ಕಷ್ಟದಲ್ಲಿದ್ದವರ ಸೇವೆ ಮಾಡುವುದೇ ನಿಜವಾದ ಸೇವೆ ಎಂದು ಮಾವ-ಅತ್ತೆ ನನ್ನನ್ನು ಹುರಿದುಂಬಿಸಿದ್ದಾರೆ ಎಂದು ನರ್ಸ್ ಭಾರತಿ ಕುಟುಂಬದ ಪ್ರೋತ್ಸಾಹವನ್ನು ನೆನೆಯುತ್ತಾರೆ.
ಕುಟುಂಬ ಮುನ್ನಡೆಸುವವರಿಗೆ ಅನೇಕ ಕಡೆ ಕೊರೊನಾ ಸೋಂಕು ತಗುಲಿದೆ. ಅವರ ಸೇವೆಯೇ ದೇವರ ಸೇವೆ ಎಂದುಕೊಂಡು ಶ್ರದ್ಧೆಯಿಂದ ಕೆಲಸ ಮಾಡಿದ ತೃಪ್ತಿ ನನಗಿದೆ ಎಂದು ಭಾರತಿ ಅವರು ಹೇಳುತ್ತಾರೆ.
ಕಳೆದು 15 ದಿನಗಳಿಂದ ರೋಗಿಗಳ ರಕ್ತದೊತ್ತಡ ಹಾಗೂ ಸಕ್ಕರೆ ಪ್ರಮಾಣ ಪರೀಕ್ಷಿಸುವುದು, ಔಷಧ ನೀಡುವುದು, ಆರೈಕೆ ಮಾಡುವುದು ಹೀಗೆ ವಿವಿಧ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಅವರ ಪತಿ ಗ್ರಾಮ ಪಂಚಾಯತ್‌ನಲ್ಲಿ ಕೆಲಸದಲ್ಲಿದ್ದಾರೆ. ಭಾರತಿ ಅವರ ಸೇವೆ ಬೇರೆಯವರಿಗೂ ಮಾದರಿ ಆಗಲಿ ಎನ್ನುವುದು ಎಲ್ಲರ ಆಶಯವಾಗಿದೆ.
ಬದುಕು ನಿಶ್ಚಿತ ಸಾವು ಖಚಿತ ಎಂದು ಇರುವಾಗ ಬೇರೆಯವರ ಸೇವೆಯಲ್ಲಿ ನಮ್ಮ ಆತ್ಮ ತೃಪ್ತಿ ಹುಡುಕುವವರೇ ನಿಜವಾದ ಮನುಷ್ಯ ಎನ್ನುವ ಅಂತರಾಳದ ಮಾತು ಎಂಥವರನ್ನು ಸಮಾಜ ಸೇವೆಯತ್ತ ಸೆಳೆಯುತ್ತದೆ.