ಮುದ್ದೇಬಿಹಾಳ/ವಿಜಯಪುರ: ಅವರಿಬ್ಬರದ್ದು ಅನ್ಯೋನ್ಯ ಸಂಸಾರ.. ನಿನಗೆ ನಾನು, ನನಗೆ ನೀನು ಎಂದು ಕೂಡಿ ಬಾಳಿದವರು. ದಶಕಗಳ ಕಾಲ ದಾಂಪತ್ಯದಲ್ಲಿ ಒಂದಾಗಿದ್ದ ದಂಪತಿ ಸಾವಿನಲ್ಲೂ ಜೊತೆಯಾಗಿದ್ದಾರೆ. ಮುದ್ದೇಬಿಹಾಳದ ಸಂಗಮೇಶ್ವರ ನಗರದ ನಿವಾಸಿ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಸಾಹೇಬಗೌಡ ಬಸವಂತರಾಯ ಕರಡ್ಡಿ ಬುಧವಾರ ನಿಧನರಾಗಿದ್ದರು. ಅವರನ್ನು ಹಿಂಬಾಲಿಸಿ ಪತ್ನಿ ಪಾರ್ವತಿ ಸಾಹೇಬಗೌಡ ಕರಡ್ಡಿ ಅವರು ಸಹ ಗುರುವಾರ ಬೆಳಗ್ಗೆ ಕೊನೆಯುಸಿರೆಳೆದರು.
ಕಳೆದ ಹದಿನೈದು ದಿನಗಳಿಂದ ತೀವ್ರ ಅಸ್ವಸ್ಥರಾಗಿ ಕೋಮಾ ಸ್ಥಿತಿಗೆ ತಲುಪಿದ್ದ ಪತ್ನಿ ಪಾರ್ವತಿ ಅವರ ಅನಾರೋಗ್ಯದ ಚಿಂತೆಯಲ್ಲಿಯೇ ಸಾಹೇಬಗೌಡ ಮಂಗಳವಾರ ರಾತ್ರಿ ನಿಧನರಾಗಿದ್ದರು. ಪತಿಯ ನಿಧನವಾದ ಒಂದೇ ದಿನದಲ್ಲೇ ಅವರ ಪತ್ನಿಯು ಉಹಲೋಕ ತ್ಯಜಿಸಿದ್ದಾರೆ. ಪತಿ ಸಾಹೇಬಗೌಡರ ಸಮಾಧಿ ಪಕ್ಕದಲ್ಲಿಯೇ ಅವರ ಪತ್ನಿ ಪಾರ್ವತಿ ಅವರ ಸಮಾಧಿ ಮಾಡಿ ಅಂತ್ಯಕ್ರಿಯೆ ನೆರವೇರಿಸಲಾಯಿತು. 'ಆಕೆ ಪುಣ್ಯವಂತೆ, ಸಾವಿನಲ್ಲೂ ಗಂಡನೊಂದಿಗೆ ಸೇರಿಕೊಂಡಳು' ಎಂದು ಪಟ್ಟಣದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಮದುವೆ ನಿರಾಕರಿಸಿದ್ದಕ್ಕೆ ಕತ್ತು ಹಿಸುಕಿದ ಪಾಗಲ್ ಪ್ರೇಮಿ.. ಬೀದರ್ನಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಕೊಲೆ
ಅಂತ್ಯಕ್ರಿಯೆ ನಡೆಸಲು ತೋಡಿದ ಗುಂಡಿಗೆ ಜಮೀನು ಮಾಲೀಕನಿಂದ ವಿರೋಧ: ಮತ್ತೊಂದೆಡೆ ವಿಜಯಪುರ ತಾಲೂಕಿನ ಬುರಣಾಪುರ ಗ್ರಾಮದಲ್ಲಿ ಮೃತ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ನಡೆಸಲು ತೋಡಿದ್ದ ಗುಂಡಿಯಲ್ಲಿ ಅಂತ್ಯಕ್ರಿಯೆ ನಡೆಸಲು ಪಕ್ಕದ ಜಮೀನು ಮಾಲೀಕ ವಿರೋಧ ವ್ಯಕ್ತಪಡಿಸಿದ್ದಕ್ಕೆ ಬೇರೊಂದು ಕಡೆ ಗುಂಡಿ ತೋಡಿ ಮೃತರ ಅಂತ್ಯಕ್ರಿಯೆ ನಡೆಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸ್ಮಶಾನಕ್ಕೆ ಮೀಸಲಿರಿಸಿದ ಜಾಗದಲ್ಲಿ ಅಂತ್ಯಕ್ರಿಯೆ ನಡೆಸದಂತೆ ಪಟ್ಟು: ಗ್ರಾಮದ 70 ವರ್ಷದ ವ್ಯಕ್ತಿ ಬಸವರಾಜ ತಮಟೆ ಎಂಬುವವರು ಮಂಗಳವಾರ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಗ್ರಾಮದ ಹೊರ ಭಾಗದಲ್ಲಿ ಎರಡು ಎಕರೆ ಭೂಮಿ ಸ್ಮಶಾನಕ್ಕೆ ಮೀಸಲಿರಿಸಲಾಗಿತ್ತು ಮತ್ತು ಅದೇ ಜಾಗದಲ್ಲಿ ಅಂತ್ಯಕ್ರಿಯೆಗೆ ಗುಂಡಿ ತೊಡಲಾಗಿತ್ತು. ಇನ್ನೇನು ಅಂತ್ಯಕ್ರಿಯೆ ಮಾಡಬೇಕು ಎನ್ನುವಾಗಲೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪಕ್ಕದ ಜಮೀನು ಮಾಲೀಕ ಭೀಮಸಿ ಒಂಬಾಸೆ ಮತ್ತು ಸಾಯಬಣ್ಣಾ ಹಡಪದ ಇದು ತಮಗೆ ಸೇರಿದ ಗಡಿಭಾಗದ ಜಾಗವಾಗಿರುವ ಕಾರಣ ಬೇರೆ ಕಡೆ ಅಂತ್ಯಕ್ರಿಯೆ ನಡೆಸಿ ಎಂದು ಪಟ್ಟು ಹಿಡಿದಿದ್ದರು. ಅಲ್ಲದೇ ಸ್ಮಶಾನ ಜಾಗ ಬೇರೆ ಕಡೆಯಿದೆ ಎಂದು ತೋಡಿದ ಗುಂಡಿಯಲ್ಲಿ ಕೋಳಿ ಹಾಗೂ ತೆಂಗಿನಕಾಯಿ ಹಾಕಿ ಗುಂಡಿ ಮುಚ್ಚಿದ್ದರು. ಕೋಳಿ ಹಾಗೂ ತೆಂಗಿನಕಾಯಿ ಹಾಕಿ ಮುಚ್ಚಿರುವುದು ಗ್ರಾಮಕ್ಕೆ ಅಪಚಾರವಾಗಬಹುದು ಎಂದು ಭಯಪಟ್ಟ ಕುಟುಂಬಸ್ಥರು ಬೇರೊಂದು ಜಾಗದಲ್ಲಿ ಗುಂಡಿ ತೋಡಿ ಮೃತರ ಅಂತ್ಯಕ್ರಿಯೆ ನಡೆಸಿದರು.
ಬುರಣಾಪುರ ಗ್ರಾಮದ ಸ್ಮಶಾನಕ್ಕಾಗಿ ಮೀಸಲಿರಿಸಿದ್ದ ಸ್ಥಳದಲ್ಲೇ ಅಂತ್ಯಕ್ರಿಯೆಗೆಂದು ಗುಂಡಿಯನ್ನು ತೋಡಲಾಗಿತ್ತು. ಇದು ಸ್ಮಶಾನ ಹಾಗೂ ಪಕ್ಕದ ಜಮೀನು ಮಾಲೀಕರ ನಡುವಿನ ಗಡಿ ಭಾಗವಾಗಿರುವ ಕಾರಣ ಈ ಸಮಸ್ಯೆ ಉಂಟಾಗಿದೆ. ಕನಿಷ್ಠ ಎರಡು ಜಮೀನು ಮಧ್ಯೆ ಗೋಡೆಯಾದರೂ ನಿರ್ಮಿಸಿದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಮಾರಕಾಸ್ತ್ರದಿಂದ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ.. ಕಲಬುರಗಿಯಲ್ಲಿ ಹುಚ್ಚಾಟ ಮೆರೆದ ವ್ಯಕ್ತಿ ಕಾಲಿಗೆ ಪೊಲೀಸ್ ಫೈರಿಂಗ್