ಮುದ್ದೇಬಿಹಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡ ಹೆಣ್ಣು ಮಕ್ಕಳ ದಿನಾಚರಣೆ ನಿಮಿತ್ತ ತಾಲೂಕಿನ ಕವಡಿಮಟ್ಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಒಂದು ದಿನದ ಮಟ್ಟಿಗೆ ಬಾಲಕಿಯೊಬ್ಬಳು ಸೇವೆ ಸಲ್ಲಿಸಿದ್ದಾಳೆ.
ಹೆಣ್ಣು ಮಕ್ಕಳು ಎಂಬ ಅಸಮಾನತೆ ಹೋಗಲಾಡಿಸಿ ಸಮಾನತೆಯ ಸಮಾಜ ನಿರ್ಮಾಣದ ದೃಷ್ಟಿಯಿಂದ ಗಿರಿಜಾ ಶಿವಯೋಗಿಮಠ (14) ಎಂಬ ಬಾಲಕಿಯನ್ನು ಪಿಡಿಒ ಆಗಿ ನೇಮಿಸುವ ಮೂಲಕ ಪಂಚಾಯಿತಿ ಪಿಡಿಒ ಪಿ.ಎಸ್. ಕಸನಕ್ಕಿ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು.
ಈ ವೇಳೆ ಮಾತನಾಡಿದ ಪಿಡಿಒ ಪಿ.ಎಸ್.ಕಸನಕ್ಕಿ, ಭಾರತ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಹಾಗೂ ಹಕ್ಕುಗಳು ಇವೆ. ಹೀಗಿದ್ದರೂ ಹೆಣ್ಣು - ಗಂಡು ಎನ್ನುವ ಅಸಮಾನತೆ, ತಾರತಮ್ಯ ಇಂದಿಗೂ ಜೀವಂತವಾಗಿದೆ. ಈ ಅಸಮಾನತೆ ಹೋಗಲಾಡಿಸಲು ಈ ನಿರ್ಧಾರ ಕೈಗೊಂಡಿದ್ದೇವೆ ಎಂದರು.
ಓದಿ: ನೀರಾವರಿಯಾಗುವವರೆಗೆ ಚಪ್ಪಲಿ ಹಾಕುವುದಿಲ್ಲ ಎಂದಿದ್ದ ಮನಗೂಳಿ ಇಂದಿಗೂ ಜನರ ಮನದಲ್ಲಿ ಶಾಶ್ವತ
ಬಳಿಕ ಕವಡಿಮಟ್ಟಿ ಗ್ರಾ.ಪಂ ಕಚೇರಿಗೆ ಕರೆದುಕೊಂಡು ಹೋಗಿ ಖುರ್ಚಿಯಲ್ಲಿ ಕೂರಿಸುವ ಮೂಲಕ ಬಾಲಕಿ ಒಂದು ದಿನದ ಮಟ್ಟಿಗೆ ಪಿಡಿಒ ಆಗಿ ಸೇವೆ ಸಲ್ಲಿಸಿದಳು.