ವಿಜಯಪುರ: 15 ರಿಂದ 20 ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರು ಪಕ್ಷ ಸೇರ್ಪಡೆಗೆ ಸಿದ್ದರಿದ್ದಾರೆ. ಆದರೆ, ಸದ್ಯ ಸರ್ಕಾರಕ್ಕೆ ಧಕ್ಕೆ ಇಲ್ಲದ ಕಾರಣ ಅವರ ಸಂಪರ್ಕ ಮಾತ್ರ ಹೊಂದಿದ್ದೇವೆ ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ಇತ್ತೀಚೆಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನೀಡಿದ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು, ಅವರು ಹೇಳಿದ್ದು ಕೇವಲ 4-5 ಶಾಸಕರನ್ನು ರಾಜೀನಾಮೆ ಕೊಡಿಸುವ ಶಕ್ತಿಯಿದೆ ಎಂದು. ಆದರೆ, ಕಾಂಗ್ರೆಸ್ ಪಕ್ಷದ ನಡವಳಿಕೆಯಿಂದ ಬೇಸತ್ತ 15 ರಿಂದ 20 ಶಾಸಕರು ನಮ್ಮ ಪಕ್ಷಕ್ಕೆ ಸೇರಲು ಸಿದ್ದವಿರುವುದಾಗಿ ತಿಳಿಸಿದ್ದಾರೆ ಎಂದರು.
ಮುಂಬರುವ ಉಪಚುನಾವಣೆಯ ಸಿದ್ದತೆ ಆರಂಭಗೊಂಡಿದೆ. ಶಾಸಕ ಎಂ.ಸಿ.ಮನಗೂಳಿ ಅವರ ನಿಧನದ ನಂತರ ತೆರವಾದ ಶಾಸಕ ಸ್ಥಾನಕ್ಕೆ ನಡೆಯುವ ಉಪಚುನಾವಣೆಯಲ್ಲಿ ಪಕ್ಷದಿಂದ ಯಾರನ್ನು ಕಣಕ್ಕೆ ಇಳಿಸುತ್ತೇವೆ ಎನ್ನುವ ಬಗ್ಗೆ ಇನ್ನೂ ಪೂರ್ಣ ಚರ್ಚೆ ನಡೆದಿಲ್ಲ. ಡಿಸಿಎಂ ಲಕ್ಷ್ಮಣ ಸವದಿ ಸ್ಪರ್ಧೆ ಸಹ ಯಾವುದೇ ಖಚಿತವಾಗಿಲ್ಲ. ಇನ್ನೂ ಸಮಯವಿದೆ. ನಂತರ ಮುಖಂಡರ, ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಶೋಕಾಸ್ ನೋಟಿಸ್ ನೀಡಲಾಗಿದೆ:
ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರ ಕುಟುಂಬದ ವಿರುದ್ಧ ಪದೇ - ಪದೆ ಟೀಕೆ ಮಾಡುತ್ತಿರುವ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಕಾರಣ ಕೇಳಿ, ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ. ನೋಟಿಸ್ ಈಗಾಗಲೇ ಯತ್ನಾಳ್ ಅವರಿಗೆ ನೀಡಲಾಗಿದ್ದು, ಇಲ್ಲಿಯವರೆಗೆ ಅವರಿಂದ ಉತ್ತರ ಬಂದಿಲ್ಲ ಎಂದರು.
ಸಂವಿಧಾನದ ಮೇಲೆ ನಂಬಿಕೆ ಇರಬೇಕು:
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಣೆ ಕುರಿತು ಪ್ರತಿಪಕ್ಷದ ನಾಯಕರು ಮಾಡುತ್ತಿರುವ ಟೀಕೆಗೆ ತೀಕ್ಷ ಪ್ರತಿಕ್ರಿಯೆ ನೀಡಿದ ಕಟೀಲ್, ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇರಬೇಕು. ರಾಮಮಂದಿರ ನಿರ್ಮಾಣಕ್ಕೆ ಸರ್ವೋಚ್ಚ ನ್ಯಾಯಾಲಯ ಅನುಮತಿ ನೀಡಿದೆ. ಹೀಗಿರುವಾಗ ಅದರ ಬಗ್ಗೆ ಅನಾವಶ್ಯಕ ಹೇಳಿಕೆ ನೀಡುವುದು ಸರಿಯಲ್ಲ. ದೇಣಿಗೆ ಯಾವುದೇ ಒತ್ತಾಯಪೂರ್ವಕವಾಗಿ ಸಂಗ್ರಹಿಸುತ್ತಿಲ್ಲ. ದೇಣಿಗೆ ನೀಡುವುದು, ಬಿಡುವುದು ಸಿದ್ದರಾಮಯ್ಯ ಅವರಿಗೆ ಬಿಟ್ಟ ವಿಷಯ ಎಂದರು.