ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದ 13 ವರ್ಷದ ಅಯ್ಯಪ್ಪಸ್ವಾಮಿ ಮಾಲಾಧಾರಿ ಬಾಲಕ ಷಣ್ಮುಖ ತನ್ನ ನೆಚ್ಚಿನ ನಾಯಕ ನಟ ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಸಮೇತ ಶಬರಿಮಲೈನಲ್ಲಿರುವ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತೆರಳಿದ್ದಾನೆ.
ಷಣ್ಮುಖನ ತಂದೆ ಮಲ್ಲಿಕಾರ್ಜುನ ಗಂಗನಗೌಡರ ಅವರು ಕಳೆದ 25 ವರ್ಷಗಳಿಂದ ನಿರಂತರ ಅಯ್ಯಪ್ಪನ ದರ್ಶನಕ್ಕೆ ಮಾಲಾಧಾರಿಯಾಗಿ ಹೋಗಿ ಬರುತ್ತಾರೆ. ಈ ಬಾರಿ ಬಾಲಕ ಷಣ್ಮುಖ ತಂದೆಯೊಂದಿಗೆ ಮಾಲಾಧಾರಿಯಾಗಿ ಹೊರಟು ನಿಂತಿದ್ದಾರೆ. ಪುನೀತ್ ರಾಜಕುಮಾರ್ ಕೂಡ ಪ್ರತಿ ವರ್ಷ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದರು.
ಸಣ್ಣ ವಯಸ್ಸಿನಿಂದಲೂ ಮಾಲೆ ಹಾಕಿ ಅಣ್ಣ ಶಿವರಾಜ್ ಕುಮಾರ್, ತಮ್ಮ ತಂದೆ ಡಾ. ರಾಜಕುಮಾರ್ ಜತೆ ಅಪ್ಪು ಶಬರಿಮಲೈ ಯಾತ್ರೆ ಮಾಡಿದ್ದನ್ನು ಟಿವಿಯಲ್ಲಿ ನೋಡಿರುವೆ. ಈ ಬಾರಿ ನನ್ನೊಂದಿಗೆ ಅಪ್ಪು ಸರ್ 18 ಮೆಟ್ಟಿಲುಗಳನ್ನು ಏರಿ ಬರಲಿ. ಅವರಿಗೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿಸುವೆ ಎಂದು ಮುಗ್ಧತೆಯಿಂದ ಹೇಳಿ ತಮ್ಮ ಭಕ್ತಿ ಪ್ರದರ್ಶನ ಮಾಡಿದ್ದಾನೆ.
ಈ ಬಗ್ಗೆ ಮಾತನಾಡಿರುವ ಷಣ್ಮುಖ ಅವರ ತಂದೆ ಮಲ್ಲಿಕಾರ್ಜುನ, ಇದು ಷಣ್ಮುಖ ಕೈಗೊಂಡಿರುವ 10ನೇ ವರ್ಷದ ಶಬರಿಮಲೆ ಯಾತ್ರೆ. ಜತೆಗೆ ಅಪ್ಪು ಸರ್ ಭಾವಚಿತ್ರವನ್ನು ಜೊತೆಗೆ ತಂದಿದ್ದಾನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋದಲ್ಲಿ ಮಿಂಚಿದ ಬಾಲಕಿ ದುರಂತ ಸಾವು