ಕಾರವಾರ: ಉದ್ಯೋಗದ ನಿಮಿತ್ತ ಜಿಲ್ಲೆಯ ಜೊಯಿಡಾದಿಂದ ಗೋವಾಗೆ ತೆರಳಿದ್ದ 23 ವರ್ಷದ ಯುವಕನಲ್ಲಿ ಧೃಡಪಟ್ಟಿದೆ ಎನ್ನಲಾಗಿದ್ದ ಕೊರೊನಾ ಸೋಂಕು ಇಂದಿನ ವರದಿಯಲ್ಲಿ ನೆಗೆಟಿವ್ ಬಂದಿದೆ.
ಜೊಯಿಡಾದಿಂದ ಕಾರವಾರಕ್ಕೆ ಆಗಮಿಸಿದ ಯುವಕ ಮೇ 14 ರಂದು ಮಾಜಾಳಿಗಡಿ ಮೂಲಕ ಗೋವಾಗೆ ಔಷಧಿ ಕಂಪನಿಯೊಂದರಲ್ಲಿ ಉದ್ಯೋಗಕ್ಕಾಗಿ ತೆರಳಿದ್ದ. ಆದರೆ ಮಾಜಾಳಿ ಚೆಕ್ ಪೋಸ್ಟ್ ಬಳಿ ತಪಾಸಣೆ ನಡೆಸಿದ ಗೋವಾ ಸಿಬ್ಬಂದಿ ಈತನಿಗೆ ವಾಸ್ಕೊದ ಕ್ವಾರಂಟೈನ್ ಕೇಂದ್ರದಲ್ಲಿ ಕ್ವಾರಂಟೈನ್ ಮಾಡುವಂತೆ ಸೂಚಿಸಿದ್ದರು.
ಅಲ್ಲದೆ ಈತನ ಗಂಟಲು ದ್ರವದ ಮಾದರಿಯನ್ನು ಮುಂಬೈನ ಖಾಸಗಿ ಲ್ಯಾಬ್ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಇಲ್ಲಿಂದ ಬಂದ ವರದಿಯಲ್ಲಿ ಕೊರೊನಾ ದೃಢಪಟ್ಟಿತ್ತು. ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಖಾಸಗಿ ವರದಿ ಇಟ್ಟುಕೊಂಡು ಘೋಷಣೆ ಕೂಡ ಮಾಡಿದ್ದರು. ಇದು ಸೋಂಕಿತ ಸೇರಿದಂತೆ ಜಿಲ್ಲೆಯ ಅಧಿಕಾರಿಗಳಿಗೂ ದೊಡ್ಡ ತಲೆನೋವಾಗಿ ಬಳಿಕ ಯುವಕನ ಮೂಲ ಪತ್ತೆಗೆ ತಡಕಾಡಿದ್ದರು. ಆದರೆ ಒಂದೇ ರೂಮ್ನಲ್ಲಿದ್ದ ಇತನ ಸ್ನೇಹಿತನ ವರದಿ ನೆಗೆಟಿವ್ ಬಂದ ಕಾರಣ, ಪುನಃ ಗೋವಾ ವೈದ್ಯಕೀಯ ಕಾಲೇಜಿನ ಕೋವಿಡ್-19 ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಇದೀಗ ವರದಿ ನೆಗೆಟಿವ್ ಬಂದಿದ್ದು, ಯುವಕ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ.