ಶಿರಸಿ, ಉತ್ತರ ಕನ್ನಡ: ಗುಜರಾತ್‌ನ ಮೊರ್ಬಿಯಲ್ಲಿ ಸೇತುವೆ ಕುಸಿದು ನೂರಾರು ಜನರು ಜಲಸಮಾಧಿ ಆಗಿರುವ ದುರಂತ ಸುದ್ದಿ ಎಲ್ಲರಿಗೋ ಗೊತ್ತೇ ಇದೆ. ಮೃತದೇಹಗಳ ಪತ್ತೆ ಕಾರ್ಯ, ಗಾಯಾಳುಗಳಿಗೆ ಚಿಕಿತ್ಸೆ ಇನ್ನೂ ಮುಂದುವರೆದಿದೆ. ಇತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ತೂಗು ಸೇತುವೆ ಮೇಲೆ ಕೆಲ ಪ್ರವಾಸಿಗರು ಕಾರು ಚಲಾಯಿಸಿ ಉದ್ಧಟತನ ಮೆರೆದಿರುವ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ತೂಗುಸೇತುವೆ ಮೇಲೆ ಕಾರು ಚಲಾಯಿಸಿ ದರ್ಪ ಮೆರೆದಿದ್ದ ಪ್ರವಾಸಿಗರ ಪೈಕಿ ಕಾರು ಸಹಿತ ಓರ್ವ ಸ್ಥಳೀಯ ಯುವಕನನ್ನು ಜೋಯಿಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೋಯಿಡಾ ತಾಲ್ಲೂಕಿನ ಮುಜಾಹಿದ್ ಆಜಾದ್ ಸಯ್ಯದ್ (25) ವಶಕ್ಕೆ ಪಡೆದ ಆರೋಪಿಯಾಗಿದ್ದಾನೆ.
ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಿವಪುರ ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆಯ ಮೇಲೆ ಅಪರಿಚಿತರು ಕಾರು ಚಲಾಯಿಸಿಕೊಂಡು ಬಂದಿದ್ದರು. ಇದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದಾಗ ಕಾರಿನಲ್ಲಿದ್ದವರು ಅನುಚಿತವಾಗಿ ವರ್ತಿಸಿ, ದರ್ಪ ತೋರಿದ್ದಾರೆ ಎಂದು ಸ್ಥಳದಲ್ಲಿದ್ದ ಪ್ರವಾಸಿಗರು ದೂರಿದ್ದರು. ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಇವರ ಪುಂಡಾಟಿಕೆ ವಿಡಿಯೋ ಸಹ ವೈರಲ್ ಆಗಿತ್ತು.
ಸೇತುವೆಯಲ್ಲಿ ಸಾಗಿ ಬಂದ ಕಾರನ್ನು ಸ್ಥಳೀಯರು ತಡೆದು, ಬಂದ ದಾರಿಗೆ ಹಿಂದಕ್ಕೆ (ರಿವರ್ಸ್ ಗೇರ್‌ನಲ್ಲಿ) ಕಳುಹಿಸಿದ್ದರು. ಗುಜರಾತ್‌ನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದು ನೂರಾರು ಜನ ಮೃತಪಟ್ಟ ದುರ್ಘಟನೆ ಸಂಭವಿಸಿದ್ದರೂ ಕೆಲವರು ಎಚ್ಚೆತ್ತುಕೊಂಡಿಲ್ಲ. ಕಾರು ಚಲಾಯಿಸಿ ಸೇತುವೆಗೆ ಹಾನಿಯಾಗಿ ಅಪಾಯವಾದರೆ ಯಾರು ಹೊಣೆಯಾಗುತ್ತಾರೆ ಎಂದು ಪ್ರವಾಸಿಗರು, ಸ್ಥಳೀಯರು ಪ್ರಶ್ನಿಸಿದ್ದರು.
ಪ್ರಸಿದ್ಧ ಯಾತ್ರಾಸ್ಥಳ ಜೊಯಿಡಾ ತಾಲೂಕಿನ ಉಳವಿಯಿಂದ ಬರುವ ಅನೇಕ ಮಂದಿ ಶಿವಪುರದ ತೂಗು ಸೇತುವೆಗೆ ಭೇಟಿ ನೀಡುತ್ತಾರೆ. ಅಲ್ಲಿನ ಪ್ರಾಕೃತಿಕ ಸೌಂದರ್ಯ ಇರುವ ಕಾರಣ ಇದು ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿದೆ. ಹಲವು ಗ್ರಾಮಸ್ಥರಿಗೆ ಈ ತೂಗು ಸೇತುವೆ ದೈನಂದಿನ ಜೀವನದ ಅಗತ್ಯ ಸೌಕರ್ಯವಾಗಿದೆ.
ಪ್ರವಾಸಕ್ಕೆ ಬಂದ ಕೆಲವರು ಸೇತುವೆಯ ಮೇಲೆ ಇಕ್ಕಟ್ಟಾದ ಜಾಗದಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಾರೆ. ಕಾರು ಬಂದಾಗ ಸೇತುವೆಯಲ್ಲಿ ನಡೆದುಕೊಂಡು ಹೋಗಲು ಕೂಡ ಜಾಗವಿರುವುದಿಲ್ಲ. ಇದೊಂದು ದುಸ್ಸಾಹಸ, ಕಾರನ್ನು ಅದರಲ್ಲಿ ತರಬೇಡಿ ಎಂದು ಗ್ರಾಮದ ಹಿರಿಯರು ಕಿವಿಮಾತು ಹೇಳಿದರೂ ಧಿಕ್ಕರಿಸುತ್ತಿದ್ದಾರೆ. ಅಂಥವರ ವಿರುದ್ಧ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸೇತುವೆಗೆ ಅಪಾಯವಾಗದಂತೆ ಕಾಪಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು.
ಓದಿ: ಗುಜರಾತ್ ದುರ್ಘಟನೆ ಆದ್ರೂ ಬುದ್ಧಿ ಕಲಿಯದ ಜನ.. ಯಲ್ಲಾಪುರದಲ್ಲಿ ತೂಗು ಸೇತುವೆ ಮೇಲೆ ಕಾರು ಓಡಿಸಿ ಉದ್ಧಟತನ