ಶಿರಸಿ(ಉತ್ತರ ಕನ್ನಡ): ಬುಡಕಟ್ಟು ಜನರು ಬೆಳೆಸಿದ್ದ ಬಾಳೆ, ಅಡಿಕೆಯನ್ನು ಕಡಿದು ಹಾಕುವ ಮೂಲಕ ಈ ಸಮುದಾಯಗಳ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿ ದಬ್ಬಾಳಿಕೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಕೊರೊನಾ ಸಮಯದಲ್ಲೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಚಿತಗೇರಿ ಗ್ರಾಮದಲ್ಲಿ ಮಂಚಿಕೇರಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಬುಡಕಟ್ಟು ಸಮುದಾಯದ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಅತಿಕ್ರಮಣ ಮಾಡುತ್ತಾರೆಂಬ ಆರೋಪದಡಿ ಬುಡಕಟ್ಟು ನಿವಾಸಿಗಳು ಬೆಳೆಸಿದ್ದ ಬಾಳೆ, ಅಡಿಕೆ ಮರಗಳನ್ನು ನೆಲೆಸಮ ಮಾಡಿದ ಸಿಬ್ಬಂದಿ, ಜಿಪಿಎಸ್ ಆಗಿರುವ ಮನೆಗಳ ನಿವಾಸಿಗಳು ಬೆಳೆಸಿರುವ ಬೆಳೆ ಗಿಡಗಳನ್ನು ಕೂಡ ಕಡಿದು ಹಾಕಿದ್ದಾರೆ. ಈ ಕಾರಣದಿಂದ ಅರಣ್ಯ ಇಲಾಖೆಯ ಸಿಬ್ಬಂದಿ ವರ್ತನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬುಡಕಟ್ಟು ನಿವಾಸಿಗಳು, ಬಡವರ ವಿರುದ್ಧ ಭಾರೀ ಕಾನೂನು ಮಾಡ್ತೀರಿ. ಎಲ್ಲವನ್ನೂ ಕಡಿದು ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.