ಶಿರಸಿ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬೀಮಣ್ಣ ನಾಯ್ಕ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದ್ದು, ಅನರ್ಹ ಶಾಸಕ ಹೆಬ್ಬಾರ್ಗೆ ತೀವ್ರ ಪೈಪೋಟಿ ನೀಡುವ ಲೆಕ್ಕಾಚಾರ 'ಕೈ' ಪಕ್ಷದ್ದಾಗಿದೆ.
ಉಪಚುನಾವಣೆಗೆ ಕಾಂಗ್ರೆಸ್ ರೆಡಿ: 8 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಉಪಚುನಾವಣೆ ಸಂಬಂಧ ಎಐಸಿಸಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಕರ್ನಾಟಕದ ಒಟ್ಟು ಎಂಟು ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಅದರಲ್ಲಿ ಶಿವರಾಮ್ ಹೆಬ್ಬಾರ್ ರಿಂದ ತೆರವಾಗಿದ್ದ ಸ್ಥಾನಕ್ಕೆ, ಈ ಹಿಂದೆ ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಸೋತಿದ್ದ ಭೀಮಣ್ಣ ನಾಯ್ಕ ಅವರನ್ನು ಕ್ಷೇತ್ರ ಬದಲಿಸಿ ಯಲ್ಲಾಪುರದಿಂದ ಕಣಕ್ಕಿಳಿಸಲಾಗಿದೆ.
ನೇರ ಹಣಾಹಣಿ
ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಉಪಚುನಾವಣೆಯಲ್ಲಿ ಸ್ವರ್ಧಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದಲ್ಲಿ, ಬಿಜೆಪಿಯಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಕಳೆದ ಚುನಾವಣೆಯಲ್ಲಿ ಒಂದಾಗಿ ಕೆಲಸ ಮಾಡಿದವರು ಉಪಚುನಾವಣೆಯಲ್ಲಿ ಎದುರಾಳಿಗಳಾಗಲಿದ್ದಾರೆ.
ಹೈಕಮಾಂಡ್ ಆದೇಶ
ಭೀಮಣ್ಣ ನಾಯ್ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಯಲ್ಲಾಪುರ ಕ್ಷೇತ್ರಕ್ಕೆ ಪರಿಚಿತರಾಗಿದ್ದಾರೆ. ಶಿರಸಿ - ಸಿದ್ದಾಪುರ ಸ್ವಕ್ಷೇತ್ರವಾಗಿದ್ದರೂ ಸಹ ಹೈಕಮಾಂಡ್ ಆದೇಶದ ಮೇರೆಗೆ ಯಲ್ಲಾಪುರದಿಂದ ಸ್ಪರ್ಧಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಭೀಮಣ್ಣ ಸ್ಪರ್ಧೆಯಿಂದ ಉಪ ಕದನದಲ್ಲಿ ತೀವ್ರ ಪೈಪೋಟಿ ನಿರೀಕ್ಷೆ ಮಾಡಲಾಗಿದ್ದು, ಅನರ್ಹ ಶಾಸಕ ಹೆಬ್ಬಾರರ ಮೂರನೇ ಗೆಲುವಿಗೆ ಭೀಮಣ್ಣ ಅಡ್ಡಿಯಾಗಬಹುದು ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.