ಭಟ್ಕಳ: ವಿಶ್ವ ವಿಶೇಷ ಚೇತನರ ದಿನಾಚರಣೆ ಅಂಗವಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಬೆಂಗಳೂರು, ಉತ್ತರ ಕನ್ನಡ ಜಿಲ್ಲಾ ವಿಶೇಷ ಚೇತನರ ಹಾಗೂ ಪಾಲಕರ ಒಕ್ಕೂಟ ಕುಮಟಾ ಇವರ ವತಿಯಿಂದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ವಿಶ್ವ ವಿಶೇಷ ಚೇತನರ ದಿನಾಚರಣೆಯನ್ನು ಡಿಸೆಂಬರ್ 3ರಂದು ಮಾತ್ರ ಆಚರಿಸುವ ಸರ್ಕಾರ, ಮಾನವೀಯ ದೃಷ್ಟಿಯಿಂದ ಅವರು ಬದುಕಲು ಅವಕಾಶ ನೀಡುತ್ತಿಲ್ಲ. ಜನಸಾಮಾನ್ಯರಂತೆ ಬದುಕಲು ನಮಗೂ ಅವಕಾಶವಿದೆ ಎಂದರು. ಅದೆಷ್ಟೋ ವಿಶೇಷ ಚೇತನರು ಪೋಷಕರಿಲ್ಲದೆ ಭಿಕ್ಷೆ ಬೇಡಿ ಬದುಕಬೇಕಾದ ಪರಿಸ್ಥಿತಿ ಉಂಟಾಗಿದೆ. ವಿಶೇಷ ಚೇತನರು ಅಸಹಾಯಕರಾಗಿದ್ದರೂ ಸಹ ಉತ್ತಮ ಜೀವನ ನಡೆಸುವ ಮನಸ್ಸು ಅವರಲ್ಲಿರುತ್ತದೆ. ಸರ್ಕಾರ ಅಧಿಕಾರಕ್ಕಾಗಿ ದಿನ ಕಳೆಯದೇ ಉತ್ತಮ ಮಟ್ಟದ ಜೀವನ ನಡೆಸಲು ಸಹಕರಿಸಬೇಕೆಂದು ಜತೆಗೆ ಹಲವು ಬೇಡಿಕೆಗಳನ್ನು ಪೂರೈಸಬೇಕೆಂದು ವಿಶ್ವ ವಿಶೇಷ ಚೇತನರ ದಿನಾಚರಣೆ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬೇಡಿಕೆಗಳು : ವಿಶೇಷ ಚೇತನರ ಮಾಸಾಶನ ಪ್ರತಿ ತಿಂಗಳು 5000/- ಹೆಚ್ಚಿಸುವುದು. ವಿದ್ಯಾರ್ಹತೆ ಹೊಂದಿರುವ ಎಲ್ಲಾ ವಿಶೇಷ ಚೇತನರಿಗೆ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸುವುದು. ಸರ್ಕಾರದ ಆದೇಶದಂತೆ ಶೇ 5% ಅನುದಾನ ಎಲ್ಲಾ ಕ್ಷೇತ್ರದಲ್ಲಿಯೂ ಕಲ್ಪಿಸುವುದು. ಗ್ರಾಮ ಪಂಚಾಯತ್ನಿಂದ ಕೇಂದ್ರ ಸರ್ಕಾರದವರೆಗೆ ವಿಶೇಷ ಚೇತನರು ಚುನಾವಣೆಯಲ್ಲಿ ಸ್ಪರ್ಧಿಸಲು ಮೀಸಲಾತಿ ಕಲ್ಪಿಸಬೇಕು. ಬಸ್ಸು, ರೈಲ್ವೆಯಲ್ಲಿ ಮೀಸಲಿರುವ ಸ್ಥಳದಲ್ಲಿ ಕಡ್ಡಾಯವಾಗಿ ಬಳಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅವರ ಕಲೆ, ಸಾಂಸ್ಕೃತಿಕ ಮತ್ತು ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಈ ಎಲ್ಲಾ ಬೇಡಿಕೆಗಳನ್ನು ರಾಜ್ಯ ಸರ್ಕಾರ ಹೆಚ್ಚಿನ ಗಮನ ಹರಿಸಿ ವಿಶೇಷ ಚೇತನರ ಪಾಲಿಗೆ ಬೆಳಕಾಗಬೇಕೆಂದು ಈ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.