ಕಾರವಾರ: ಏಡ್ಸ್ ಅಥವಾ ಎಚ್ಐವಿ ಬಗ್ಗೆ ಭಯಪಡುವ ಅಗತ್ಯವಿಲ್ಲ ಆದರೆ ಎಚ್ಚರಿಕೆಯಿಂದಿರಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಏಡ್ಸ್ ಪ್ರಿವಿನ್ಶನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಭಾರತೀಯ ರೆಡ್ ಕ್ರಾಸ್ ಮತ್ತಿತರರ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಏಡ್ಸ್ ಅಥವಾ ಎಚ್ಐವಿ ರೋಗದ ಬಗ್ಗೆ ಅಥವಾ ಸೋಂಕು ಪೀಡಿತರ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಇದು ನಿವಾರಣೆ ಆಗದ ಖಾಯಿಲೆಯಾಗಿರುವುದರಿಂದ ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಪ್ರತಿಪಾದಿಸಿದರು.
ಎಚ್ಐವಿ ಸೋಂಕಿತರನ್ನು ಸಮಾಜದ ಸಹಜ ಜನರಂತೆ ಪರಿಗಣಿಸಬೇಕು. ಅವರನ್ನು ಅಸಹಜವಾಗಿ ನಡೆಸಿಕೊಳ್ಳುವುದು ಕಾನೂನು ಪ್ರಕಾರವೂ ತಪ್ಪಾಗಿದ್ದು ಈ ವಿಚಾರದಲ್ಲಿ ಮಾನವೀಯತೆ ನಡಾವಳಿಗಳು ಮುಖ್ಯ ಎಂದರು. ಏಡ್ಸ್ ರೋಗ, ರೋಗ ನಿರೋಧಕವನ್ನು ಕಡಿಮೆ ಮಾಡುವ ಕಾಯಿಲೆಯಷ್ಟೇ. ಸೋಂಕಿತರು ಸತ್ವಭರಿತ ಆಹಾರ ಕ್ರಮ ಮತ್ತು ಜೀವನ ನಿರ್ವಹಣೆಯಿಂದ ಹೆಚ್ಚು ವರ್ಷಗಳು ಸಹಜವಾಗಿ ಬದುಕು ನಡೆಸಬಹುದಾಗಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಹಿರಿಯ ವೈದ್ಯ ಡಾ.ಅಮಿತ್ ಕಾಮತ್, ಏಡ್ಸ್ ರೋಗದ ಬಗ್ಗೆ ಎಚ್ಚರಿಕೆಯೇ ಮುಖ್ಯವಾಗಿದ್ದು, ಸೋಂಕಿತರನ್ನು ದೂರ ಇಡುವ ಅವಶ್ಯಕತೆ ಇಲ್ಲ ಎಂದರು. ಏಡ್ಸ್ ಅಥವಾ ಎಚ್ಐವಿ ನಿಯಂತ್ರಿಸಬಹುದಾದ ಕಾಯಿಲೆ ಆಗಿರುವುದರಿಂದ ಸಮುದಾಯದ ಸಹಕಾರವೂ ಅಗತ್ಯ. ಈ ಕಾರಣದಿಂದಲೇ ಈ ವರ್ಷದ ವಿಶ್ವ ಏಡ್ಸ್ ದಿನವನ್ನು ಸಮುದಾಯಗಳು ಬದಲಾವಣೆಯನ್ನುಂಟು ಮಾಡುತ್ತವೆ ಎಂಬ ಘೋಷ ವಾಕ್ಯದಿಂದ ಆಚರಿಸಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಿ.ಎನ್.ಅಶೋಕ ಕುಮಾರ್, ಸಾಮಾಜಿಕ ಹೋರಾಟಗಾರರಾದ ಮಾಧವ ನಾಯಕ, ನಜೀರ್ ಶೇಖ್, ಜಗದೀಶ್ ಬೀರಕೋಡಿಕರ್ ಮತ್ತಿತರರು ಉಪಸ್ಥಿತರಿದ್ದರು.