ಕಾರವಾರ: ಜಿಲ್ಲಾ ಆಸ್ಪತ್ರೆಯ ಸರ್ಜನ್ ಶಿವಾನಂದ ಕುಡ್ತಲಕರ್ ಪರ ಪತ್ರಿಕಾ ಹೇಳಿಕೆ ನೀಡಿದ ಕಾರಣಕ್ಕೆ ಸಾಮಾಜಿಕ ಕಾರ್ಯಕರ್ತ ಹಾಗೂ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಮನೆಗೆ ಮೀನುಗಾರ ಮಹಿಳೆಯರು ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಇಂದು ನಡೆದಿದೆ.
ಬಾಣಂತಿ ಗೀತಾ ಬಾನವಾಳಿಕರ್ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ನಂತರ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸುವ ವೇಳೆ ವೈದ್ಯರ ನಿರ್ಲಕ್ಷದಿಂದ ಮೃತಪಟ್ಟಿದ್ದು, ಈ ಕುರಿತು ಸರ್ಜನ್ ಶಿವಾನಂದ ಕುಡ್ತಲಕರ್ ಅವರ ಮೇಲೆ ಕೆಲ ಆರೋಪಗಳು ಕೇಳಿ ಬಂದಿದ್ದವು. ಆದರೆ, ಅನ್ಯಾಯವಾದ ಮಹಿಳೆ ಪರ ನ್ಯಾಯಕ್ಕಾಗಿ ನಮ್ಮ ಜೊತೆ ಹೋರಾಡುವ ಬದಲು ಶಿವಾನಂದ ಪರ ಹೇಳಿಕೆ ನೀಡುತ್ತಿರುವುದನ್ನು ಸರಿಯಲ್ಲ ಎಂದು ಮೀನುಗಾರ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಹೆರಿಗೆಯ ನಂತರ ಸಹಜವಾಗಿಯೇ ಇದ್ದ ಗೀತಾ ಬಾನವಾಳಿಕರ್ ಅವರು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಲು ತೆರಳಿದಾಗ ಮೃತಪಟ್ಟಿದ್ದಾರೆ. ಅನಸ್ತೇಶಿಯಾ ನೀಡಿದ ನಂತರ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದವರು ಆರೋಪಿಸುತ್ತಿದ್ದಾರೆ. ಸಾವನ್ನಪ್ಪಿದ ದಿನದಿಂದ ನ್ಯಾಯಕ್ಕಾಗಿ ಮೀನುಗಾರ ಮಹಿಳೆಯರು ಹೋರಾಟ ನಡೆಸುತ್ತಿದ್ದು, ಈ ವೇಳೆ ಶಿವಾನಂದ ಕುಡ್ತಲಕರ್ ವೈದ್ಯರ ಪರ ಹೇಳಿಕೆ ನೀಡಿರುವುದು ಸರಿಯಲ್ಲ. ಸಾಮಾಜಿಕ ಕಾರ್ಯಕರ್ತರಾದ ನೀವು ನಮ್ಮೊಂದಿಗೆ ಹೋರಾಟಕ್ಕೆ ಬನ್ನಿ ಎಂದು ಆಗ್ರಹಿಸಿದರು..
ಸರ್ಜನ್ ಶಿವಾನಂದ ಕುಡ್ತಲಕರ್ ತಪ್ಪು ಮಾಡಿಲ್ಲದಿದ್ದರೇ ಗೀತಾ ಸಾವಿನ ಬಳಿಕ, ಆತನ ಗಂಡನಿಗೆ 4 ಲಕ್ಷ ಕೊಡುತ್ತೇನೆ. ಮೃತ ದೇಹವನ್ನು ತೆಗೆದುಕೊಂಡು ಹೋಗಿ ಎಂದು ಯಾಕೆ ಹೇಳಬೇಕು. ತಪ್ಪಿನ ಅರಿವಿನಿಂದಲೇ ಹಣ ನೀಡಲು ಮುಂದೇ ಬಂದಿದ್ದಾರೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಈಗ ತಾಯಿ ಇಲ್ಲದೇ ಮಗು ಅನಾಥವಾಗಿದೆ. ಆ ಮಗುವಿನ ನೋವು ಯಾರಿಗೂ ಬರಬಾರದು. ಸಾಮಾಜಿಕ ಕಾರ್ಯಕರ್ತರಾದ ನೀವು ನಮ್ಮೊಂದಿಗೆ ಬನ್ನಿ ಎಂದು ಮೀನುಗಾರ ಮಹಿಳೆರು ಮಾಧವ ನಾಯಕ ಬಳಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಧವ ನಾಯಕ, ನನಗೂ ಕೂಡ ಗೀತಾ ಸಾವಿನ ಬಗ್ಗೆ ಬೇಸರವಿದೆ. ಈಗಲೂ ನಾನು ತನಿಖೆಗೆ ಒತ್ತಾಯಿಸುತ್ತೇನೆ. ಆದರೆ, ತನಿಖೆ ಹಂತದಲ್ಲಿ ವೈದ್ಯರನ್ನು ಆರೋಪಿ ಎಂಬಂತೆ ಬಿಂಬಿಸುವುದು ಸರಿಯಲ್ಲ ಎಂದು ಹೇಳಿದ್ದೇನೆ. ತನಿಖೆಯಲ್ಲಿ ವೈದ್ಯರು ಮಾಡಿದ್ದು ನಿರ್ಲಕ್ಷ್ಯವಾದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದರು.