ಕಾರವಾರ(ಉತ್ತರ ಕನ್ನಡ): ಜೊಯಿಡಾ ತಾಲ್ಲೂಕಿನ ಫೋಟೊಳಿ ನೇಚರ್ ನೆಸ್ಟ್ ಹೋಂ ಸ್ಟೇನಲ್ಲಿ ಮಹಿಳೆಯೊಬ್ಬರ ಅನುಮಾನಾಸ್ಪದ ಸಾವು ಪ್ರಕರಣ ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ದಾಂಡೇಲಿಯ ಆಶಯ ಕಾಲೋನಿಯ ನಿವಾಸಿಗಳಾದ ರವಿಚಂದ್ರ (ರವಿ), ರಾಜು ರೆಡ್ಡಿ (50) ಹಾಗೂ ವಿಜಯ ಮಹಾದೇವ ಮಾಸಾಳ (30) ಬಂಧಿತರು.
ದಾಂಡೇಲಿಯ ಗಾಂಧಿನಗರದ ಸುಶೀಲಾ ದುರ್ಗಪ್ಪ ಭೋವಿವಡ್ಡರ್ (50) ಎಂಬ ಮಹಿಳೆ ಹೋಂಸ್ಟೇನಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 26 ರಂದು ಇವರು ಸಾವನ್ನಪ್ಪಿದ್ದಾರೆ. ಆರೋಪಿಗಳು ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮೃತದೇಹವನ್ನು ಅವರ ಮನೆಗೆ ಸಾಗಿಸಿದ್ದರು. ಆದರೆ ಮಹಿಳೆಯ ಮಗಳು ಶೋಬಾ ಭೋವಿವಡ್ಡರ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅದರಂತೆ, ತನಿಖೆ ಕೈಗೊಂಡಿದ್ದ ಸಿಪಿಐ ಬಿ ಎಸ್ ಲೋಕಾಪುರ ನೇತೃತ್ವದ ತಂಡ ಹೋಂಸ್ಟೇ ಯಲ್ಲಿದ್ದವರ ವಿಚಾರಣೆ ನಡೆಸಿದೆ. ಈ ಸಂದರ್ಭದಲ್ಲಿ ಹೋಂ ಸ್ಟೇಯಲ್ಲಿದ್ದ ರವಿಚಂದ್ರ ರೆಡ್ಡಿಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಮಹಿಳೆ ತನಗೆ ದೈಹಿಕ ಸಂಪರ್ಕಕ್ಕೆ ಅವಕಾಶ ನೀಡದ್ದಕ್ಕೆ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಅಲ್ಲದೇ, ಮತ್ತೊಬ್ಬ ಆರೋಪಿ ವಿಜಯ ಮಾಸಾಳ ಕೊಲೆಯಾಗಿರುವ ಮಹಿಳೆಯ ಮೃತದೇಹವನ್ನು ದಾಂಡೇಲಿಗೆ ತೆಗೆದುಕೊಂಡು ಬಂದು ಆಕೆ ಸ್ವಾಭಾವಿಕವಾಗಿ ಮೃತಪಟ್ಟಿರುವ ಬಗ್ಗೆ ಬಿಂಬಿಸಿ ಸಾಕ್ಷ್ಯ ನಾಶ ಪಡಿಸಲು ಪ್ರಯತ್ನಿಸಿದ್ದಾನೆ. ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ವ್ಯಕ್ತಿಯ ರುಂಡ ಕತ್ತರಿಸಿದ ಪ್ರಕರಣ: ಕೊಟ್ಟ ಹಣ ವಾಪಸ್ ಕೊಡದಿದ್ದಕ್ಕೆ ಸ್ನೇಹಿತನಿಂದ ಕೊಲೆ