ಕಾರವಾರ(ಉತ್ತರಕನ್ನಡ): ಗಂಡನ ಸ್ನೇಹಿತನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಮಹಿಳೆಯೊಬ್ಬಳು ಕೊನೆಗೂ ಅಂದರ್ ಆಗಿದ್ದಾಳೆ. ಪ್ರಿಯಕರನಿಗೆ ಕೇವಲ 10 ಸಾವಿರ ಸುಪಾರಿ ಕೊಟ್ಟು ತನ್ನ ಗಂಡನನ್ನು ಕುಮಟಾದ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿಸಿರುವ ಪ್ರಕರಣವನ್ನು ಕುಮಟಾ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಗಾರರ ಸುಳಿವು ನೀಡಿದ ಕೆಎಸ್ಆರ್ಟಿಸಿ ಬಸ್ ಟಿಕೆಟ್: ಹಿಂದಿನ ಸೆ.30 ರಂದು ಕುಮಟಾ ತಾಲೂಕಿನ ದೇವಿಮನೆ ಘಟ್ಟದ ದೇವಸ್ಥಾನವೊಂದರ ಹಿಂಬದಿ ಪ್ರದೇಶದಲ್ಲಿ ಅಪರಿಚಿತ ಶವವೊಂದು ಪತ್ತೆಯಾದಾಗ, ಕುಮಟಾ ಪೊಲೀಸರು ತೆರಳಿ ಪರಿಶೀಲಿಸಿದ್ದರು. ಸುಮಾರು 35 ರಿಂದ 40 ವರ್ಷದ ಪುರುಷನನ್ನು ಯಾರೋ ಕೊಲೆ ಮಾಡಿ ದೇಹವನ್ನು ಎಸೆದು ಹೋಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.
ಇನ್ನು ಶವದ ಗುರುತಿನ ಪತ್ತೆಗೆ ಕುಮಟಾ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಪತ್ತೆಗೆ ಮುಂದಾದಾಗ ಯಾವ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಮೃತ ವ್ಯಕ್ತಿಯ ಕಿಸೆಯಲ್ಲಿ ಮಂಗಳೂರಿನಿಂದ ಶಿರಸಿಗೆ ಕೆಎಸ್ಆರ್ ಟಿಸಿ ಬಸ್ನಲ್ಲಿ ಪ್ರಯಾಣಿಸಿದ ಟಿಕೆಟ್ದಿಂದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ನೆರವಾಯಿತು.
ಕೊನೆಗೆ ಕುಮಟಾ ಪೊಲೀಸರು ಬೇರೆ ಜಿಲ್ಲೆಯಲ್ಲಿನ ನಾಪತ್ತೆ ಪ್ರಕರಣಗಳ ಪತ್ತೆಗೆ ಮುಂದಾದಾಗ ಬಾಗಲಕೋಟೆ ಜಿಲ್ಲೆಯ ಹೊಸೂರು ಗ್ರಾಮದ ಬಶೀರಸಾಬ್ ಎಂಬ ವ್ಯಕ್ತಿಯು ನಾಪತ್ತೆಯಾಗಿದ್ದು, ಆತನ ಶವ ಪತ್ತೆಯಾಗಿರುವುದು ಗೊತ್ತಾಗಿತ್ತು. ಪೊಲೀಸರು ಮೃತ ಬಶೀರಸಾಬ್ನ ಊರಿನಲ್ಲಿ ವಿಚಾರಣೆ ಮಾಡಲು ಮುಂದಾದಾಗ ಆತನಿಗೂ ಮತ್ತು ಆತನ ಪತ್ನಿಗೂ ಆಗಾಗ್ಗೆ ಗಲಾಟೆಯಾಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು.
ಸುಫಾರಿ ನೀಡಿ ಗಂಡನ ಕೊಲೆ: ಈ ಬಗ್ಗೆ ಮೃತ ಬಶೀರಸಾಬ್ ಪತ್ನಿ ರಾಜಮಾಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಹಿಂದೆ ಆಕೆ ಇರುವುದು ಶಂಕೆ ವ್ಯಕ್ತವಾಗಿತ್ತು. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರ ಪರಶುರಾಮ್, ಆತನ ಸ್ನೇಹಿತ ರವಿ ಹಾಗೂ ಆದೇಶ ಕುಂಬಾರ ಸೇರಿಕೊಂಡು ಕೊಲೆ ಮಾಡಿಸಿರುವ ವಿಷಯವನ್ನು ಬಾಯ್ಬಿಟ್ಟಿದ್ದಳು. ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಿದ್ದಾರೆ.
ಇಬ್ಬರು ಮಕ್ಕಳಿದ್ದರು ಪರ ಪುರುಷನ ಸಹವಾಸ: ಆರೋಪಿ ರಾಜಮಾಗೆ ಇಬ್ಬರು ಮಕ್ಕಳಿದ್ದು ಪತಿ ಬಶೀರಸಾಬ್ ಜೊತೆ ಚೆನ್ನಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಳು. ಬಶೀರಸಾಬ್ ಕುರಿ ಕಾಯುವ ಕೆಲಸವನ್ನು ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಬಾದಾಮಿ ತಾಲೂಕಿನಲ್ಲಿ ನಡೆದ ಜಾತ್ರೆಯೊಂದರಲ್ಲಿ ಕುರಿ ಮಾರಾಟ ಮಾಡಲು ಬಶೀರಸಾಬ್ ಸಹೋದರ ಖಾಸಿಂ ತೆರಳಿದ್ದ ವೇಳೆ ಆರೋಪಿ ಪರಶುರಾಮನ ಪರಿಚಯ ಆಗಿತ್ತು.
ಖಾಸಿಂ ಪರಿಚಯದ ಮೇಲೆ ಆರೋಪಿ ಪರಶುರಾಮ್ ಬಶೀರಸಾಬ್ ಮನೆಗೆ ಬಂದಾಗ ಆತನ ಹೆಂಡತಿ ರಾಜಮಾಳನ್ನು ಪರಿಚಯ ಮಾಡಿಕೊಂಡಿದ್ದ. ರಾಜಮಾ ಹಾಗೂ ಪರಶುರಾಮ್ ಇಬ್ಬರದ್ದು ಒಂದೇ ಊರಾಗಿದ್ದರಿಂದ ಪರಿಚಯ ನಂತರ ಪ್ರೇಮಕ್ಕೆ ತಿರುಗಿತ್ತು.
ಗಂಡನ ಕೊಲೆಗೆ ಪ್ರಿಯಕರನಿಗೆ 10 ಸಾವಿರ ನೀಡಿದ್ದ ಪತ್ನಿ : ಇಬ್ಬರ ನಡುವೆ ಅನೈತಿಕ ಸಂಬಂಧ ಸಹ ಪ್ರಾರಂಭವಾಗಿ ಈ ವಿಷಯ ಪತಿ ಬಶೀರಸಾಬ್ ಗೆ ಸಹ ತಿಳಿದಿತ್ತು. ಬಶೀರ್ ಸಾಬ್ ಹೆಂಡತಿ ರಾಜಮಾ ಜೊತೆ ಗಲಾಟೆ ಮಾಡಿಕೊಳ್ಳಲು ಪ್ರಾರಂಭ ಮಾಡಿದ್ದನು. ಆತನ ಪತ್ನಿ ರಾಜಮಾ ತನ್ನ ತವರು ಮನೆಗೆ ಬಂದು ಉಳಿದಿದ್ದಳು. ಸೆ.26ರಂದು ಪ್ರಿಯಕರ ಪರಶುರಾಮನನ್ನು ಕರೆಯಿಸಿಕೊಂಡಿದ್ದ ರಾಜಮಾ, 10 ಸಾವಿರ ರೂಪಾಯಿ ಹಣವನ್ನು ನೀಡಿ ತಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾಗಿರುವ ಪತಿಯನ್ನು ಕೊಲೆ ಮಾಡುವಂತೆ ಸುಫಾರಿ ನೀಡಿದ್ದಳು.
ಪರಶುರಾಮ್ ಬಶೀರಸಾಬ್ನನ್ನು ಪ್ರವಾಸಕ್ಕೆಂದು ತನ್ನ ಸ್ನೇಹಿತ ರವಿ ಮತ್ತು ಆದೇಶ ಎನ್ನುವವರ ಜೊತೆ ಮಂಗಳೂರಿಗೆ ಕರೆದುಕೊಂಡು ಬಂದಿದ್ದ. ಸೆ.29ರಂದು ಮಂಗಳೂರು ಪ್ರವಾಸ ಮುಗಿಸಿ ವಾಪಸ್ ಬರುವಾಗ ದೇವಿಮನೆ ಘಟ್ಟದಲ್ಲಿ ಬಸ್ನಿಂದ ಇಳಿದಿದ್ದರು. ದೇವಸ್ಥಾನದ ಹಿಂದೆ ಕುಡಿಯಲು ನಾಲ್ವರು ಕುಳಿತಿದ್ದು ಬಶೀರಸಾಬ್ನಿಗೆ ಕುಡಿಸಿದ ನಂತರ ಉಳಿದ ಪರಶುರಾಮ್, ರವಿ ಹಾಗೂ ಆದೇಶ ಮೂರು ಜನ ಸೇರಿ ಬಶೀರಸಾಬ್ ತಲೆಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ ಟಿ ಜಯಕುಮಾರ್ ಮಾಹಿತಿ ನೀಡಿದ್ದಾರೆ.
ಕುಮಟಾ ಪೊಲೀಸ್ ಠಾಣೆ ಸಿಪಿಐ ತಿಮ್ಮಪ್ಪ ನಾಯ್ಕ, ಪಿಎಸ್ಐ ನವೀನ್ ನಾಯ್ಕ ಹಾಗೂ ಸಂಪತ್ ನೇತೃತ್ವದಲ್ಲಿ ಪೊಲೀಸರ ತಂಡ ಕೆಲವೇ ದಿನದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂಓದಿ:ಗುದನಾಳದಲ್ಲಿ ಚಿನ್ನ ಬಚ್ಚಿಟ್ಟು ಸಾಗಿಸುತ್ತಿದ್ದ ಮಹಿಳೆ.. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಚಾಲಾಕಿ