ಕಾರವಾರ: ಕುಮಟಾ ತಾಲೂಕಿನ ಮಿರ್ಜಾನ್ನ ರಾಮನಗರ ನಿವಾಸಿ ಸುಬ್ರಹ್ಮಣ್ಯ ನಾಯ್ಕ ಎಂಬುವವರ ಮನೆಯಲ್ಲಿ ಅಪರೂಪದ ಬಿಳಿ ಹೆಬ್ಬಾವು ಗೋಚರಿಸಿದೆ. ಈ ಹಾವು ಯಾವ ಪ್ರಭೇದದ್ದು ಎಂದು ಗುರುತಿಸಲಾಗದೇ ಸ್ಥಳೀಯರು ಗೊಂದಲಕ್ಕೀಡಾಗಿದ್ದರು. ವಿಷಯ ತಿಳಿದ ಉರಗ ತಜ್ಞ ಪವನ್ ನಾಯ್ಕ ಸ್ಥಳಕ್ಕೆ ಬಂದು ಪರಿಶೀಲಿಸಿ ಬಿಳಿ ಹೆಬ್ಬಾವು ಎಂದು ಖಾತ್ರಿಪಡಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಪವನ್ ನಾಯ್ಕ, "ಇದು ಬೇರೆಯ ಜಾತಿ ಹಾವಲ್ಲ. ಚರ್ಮಕ್ಕೆ ಬಣ್ಣ ನೀಡುವ ವರ್ಣ ದ್ರವ್ಯ ಗ್ರಂಥಿ ಅಂದರೆ ಮೆಲಾಲಿನ್ ಅಥವಾ ಪಿಗ್ಮೆಂಟ್ ಕೊರತೆಯಿಂದ ಚರ್ಮಕ್ಕೆ ಬಣ್ಣ ಬರದೇ ಈ ರೀತಿ ಬಿಳಿ ಬಣ್ಣಕ್ಕೆ ಕಾರಣವಾಗುತ್ತದೆ. ಇದನ್ನು ಅಲ್ಬಿನೋ ಸ್ನೇಕ್ಸ್ ಎಂದು ಕೂಡಾ ಕರೆಯುತ್ತಾರೆ.
ಆದರೆ, ಅಲ್ಬಿನೋ ಹಾವುಗಳಾದರೆ ಕಣ್ಣು ಸಹ ಕೆಂಪು ಮಿಶ್ರಿತ ಬಿಳಿ ಬಣ್ಣ ಇರಬೇಕು. ಇದರ ಕಣ್ಣು ಅರ್ಧ ಮಾತ್ರ ಬಿಳಿ ಇದ್ದು ಇನ್ನರ್ಧ ಕಪ್ಪಿರುವ ಕಾರಣ ಅಲ್ಬಿನೋ ಹಾವಿನ ಗುಂಪಿಗೆ ಸೇರಿಸಲು ಸಾಧ್ಯವಿಲ್ಲ. ಆದರೂ ಇದು ಕರ್ನಾಟಕದಲ್ಲಿ ಸಿಕ್ಕಿರುವ ಅಪರೂಪದ ಹಾವು. ಹಾವನ್ನು ಸುರಕ್ಷಿತ ಜಾಗಕ್ಕೆ ಬಿಡಲಾಗಿದೆ" ಎಂದರು.
ಇದನ್ನೂ ಓದಿ: ಬೈಕ್ನಲ್ಲಿ ನಾಗರಹಾವು ಪತ್ತೆ.. ಒಂದೂವರೆ ಕಿಮೀ ದೂರದ ಗ್ಯಾರೇಜ್ಗೆ ಸಾಗಿಸಿ ಹಾವು ರಕ್ಷಣೆ