ಕಾರವಾರ : ಕರಾವಳಿಯಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಗುಡ್ಡ ಕುಸಿದು ಬಂಡೆಗಲ್ಲೊಂದು ಮನೆಗೆ ಬಂದು ಅಪ್ಪಳಿಸಿದ ಘಟನೆ ಕುಮಟಾದಲ್ಲಿ ನಡೆದಿದ್ದು, ಅದೃಷ್ಟವಶಾತ್ ಬಂಡೆಗಲ್ಲು ಅಪ್ಪಳಿಸಿದ ಕೋಣೆಯಲ್ಲಿಯೇ ಇದ್ದ ಮದುಮಗಳು ಪ್ರಾಣಪಾಯದಿಂದ ಪಾರಾಗಿದ್ದಾಳೆ.
ಉತ್ತರಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದೆ. ಕುಮಟಾದಲ್ಲಿಯೂ ಕಳೆದ ಮೂರು ದಿನಗಳಿಂದ ಉತ್ತಮಮಳೆಯಾಗಿತ್ತು. ಅದರಂತೆ ಸೋಮವಾರ ಸುರಿದ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66 ರ ತಂಡ್ರಕುಳಿ ಬಳಿ ಗುಡ್ಡ ಕುಸಿದು ಮಣ್ಣು ಹಾಗೂ ಬೃಹತ್ ಗಾತ್ರದ ಕಲ್ಲುಗುಡ್ಡದ ಪಕ್ಕದ ಮನೆಗೆ ಬಂದು ಅಪ್ಪಳಿಸಿದೆ.
ಘಟನೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಕೆಳಭಾಗದಲ್ಲಿರುವ ತಂಡ್ರಕುಳಿ ಗ್ರಾಮದ ಗಣೇಶ ತುಳಸು ಅಂಬಿಗ ಎಂಬುವವರ ಮನೆಗೆ ಹಾನಿಯಾಗಿದೆ. ಬೃಹತ್ ಕಲ್ಲು ಅಪ್ಪಳಿಸಿದ ಕಾರಣ ಮಗಳ ಮದುವೆಗೆ ಸಿಂಗಾರಗೊಂಡಿದ್ದ ಮನೆಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಗೋಡೆಗೆ ಕಲ್ಲು ಅಪ್ಪಳಿಸಿದ ಕಾರಣ ಸಂಪೂರ್ಣ ಬಿರುಕು ಬಿಟ್ಟು ಹಾನಿಯಾಗಿದೆ.
ಇದನ್ನೂ ಓದಿ: ಕೈಕೊಟ್ಟ ಮಳೆ: ಗೊಂಬೆಗಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ ಜನ
ಮದುವೆ ಸಂಭ್ರಮದಲ್ಲಿರುವವರಿಗೆ ಆಘಾತ: ಇನ್ನು ಗಣೇಶ ತುಳಸು ಅಂಬಿಗ ಅವರ ಮಗಳ ಮದುವೆಯನ್ನು ಜೂ.29 ಬುಧವಾರ ನಿಶ್ಚಯ ಮಾಡಲಾಗಿದ್ದು, ಮನೆಯನ್ನು ಮದುವೆಗಾಗಿ ಸುಣ್ಣ ಬಣ್ಣ ಬಳಿದು ಶೃಂಗರಿಸಲಾಗಿತ್ತು. ಮಾತ್ರವಲ್ಲದೆ ಮದುವೆ ಹಿನ್ನೆಲೆಯಲ್ಲಿ ಸಂಬಂಧಿಕರು ಆಗಮಿಸಿದ್ದರಿಂದ ಸಂಭ್ರಮ ಮನೆ ಮಾಡಿತ್ತು.
ಇದನ್ನೂ ಓದಿ: ವಂದೇ ಭಾರತ್ ರೈಲು ಸಂಚಾರ ಆರಂಭ: ಧಾರವಾಡದಿಂದ ಹುಬ್ಬಳ್ಳಿಗೆ ಪ್ರಯಾಣಿಸಿ ಖುಷಿಪಟ್ಟ ಗೆಹ್ಲೋಟ್, ಪ್ರಹ್ಲಾದ್ ಜೋಶಿ
ಬಂಡೆ ಅಪ್ಪಳಿಸಿದ ಕೋಣೆಯಲ್ಲಿದ್ದ ಮದುಮಗಳು: ಇನ್ನು ಮದುಮಗಳು ಮದುವೆ ಸಿದ್ದತೆಯಲ್ಲಿ ಅದೇ ಕೋಣೆಯಲ್ಲಿಯೇ ಇಬ್ಬರು ಮಕ್ಕಳ ಜೊತೆಗೆ ಇದ್ದಾಗ ಈ ಘಟನೆ ನಡೆದಿದ್ದು, ಗೋಡೆ ಗಟ್ಟಿ ಇದ್ದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಹೊರಗಡೆ ಸದ್ದಾಗಿರುವುದನ್ನು ಕೇಳಿಸಿಕೊಂಡು ಗಾಬರಿಗೊಂಡ ಮದುಮಗಳು ಹಾಗು ಮಕ್ಕಳು ಹೊರಗೆ ಓಡಿ ಹೋಗಿ ನೋಡಿದಾಗ ಬಂಡೆಗಲ್ಲು ಗೋಡೆಗೆ ಅಪ್ಪಳಿಸಿ ಬಿರುಕು ಬಿಟ್ಟಿರುವುದು ಬೆಳಕಿಗೆ ಬಂದಿದೆ. ಇನ್ನು ಘಟನೆ ಬಳಿಕ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯರ ಆತಂಕಕ್ಕೆ ಕಾರಣವಾದ ಗುಡ್ಡ ಕುಸಿತ : ಇನ್ನು 2017ರಲ್ಲಿ ಇದೇ ಗ್ರಾಮದಲ್ಲಿ ನಡೆದಿದ್ದ ಗುಡ್ಡಕುಸಿತ ಅವಘಡದಲ್ಲಿ ಮೂವರು ಮಕ್ಕಳು ಜೀವಂತ ಸಮಾಧಿಯಾಗಿದ್ದರು. ತಡರಾತ್ರಿ ವೇಳೆ ಭಾರಿ ಮಳೆಗೆ ಮನೆ ಮೇಲೆಯೇ ಗುಡ್ಡ ಕುಸಿದ ಕಾರಣ ಮಲಗಿದ್ದ ಮಕ್ಕಳು ಸಾವನ್ನಪ್ಪಿದ್ದರು. ಬಳಿಕ ಜೆಸಿಬಿ ಕಾರ್ಯಾಚರಣೆಯಲ್ಲಿ ಮಕ್ಕಳನ್ನು ಹೊರ ತೆಗೆಯಲಾಗಿತ್ತು. ಇದೀಗ ಮತ್ತೆ ಗುಡ್ಡ ಕುಸಿತವಾಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಗುಂಡ್ಲುಪೇಟೆ ಕ್ವಾರಿ ದುರಂತ: ವರ್ಷದ ಬಳಿಕ ಪ್ರಮುಖ ಆರೋಪಿ ಬಂಧನ