ಕಾರವಾರ: ಮಳೆಗಾಲ ಪ್ರಾರಂಭವಾದ್ರೆ ಸಾಕು ಆ ಗ್ರಾಮ ಸಂಪೂರ್ಣವಾಗಿ ಹೊರಜಗತ್ತಿನ ಸಂಪರ್ಕವನ್ನೇ ಕಳೆದುಕೊಳ್ಳುತ್ತದೆ. ಆ ಕಡೆ ಸರಿಯಾದ ರಸ್ತೆಯೂ ಇಲ್ಲ, ಈ ಕಡೆ ಸರಿಯಾದ ಸೇತುವೆಯೂ ಇಲ್ಲದೆ ಗ್ರಾಮದ ಜನರು ಪ್ರತಿನಿತ್ಯ ಹೈರಾಣಾಗುತ್ತಿದ್ದಾರೆ. ದಶಕಗಳಿಂದ ಇದೇ ಸಂಕಷ್ಟ ಎದುರಿಸಿ ಬೇಸತ್ತ ಗ್ರಾಮಸ್ಥರು, ಮಹಿಳೆಯರು, ಮಕ್ಕಳಸಮೇತ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದಾರೆ.
ಒಂದೆಡೆ ತುಂಬಿ ಹರಿಯುತ್ತಿರುವ ನದಿಯ ಮಧ್ಯೆ ಅನಾರೋಗ್ಯಪೀಡಿತರನ್ನು ಕಂಬಳಿಯಲ್ಲಿ ಹೊತ್ತೊಯ್ಯುತ್ತಿರುವುದು. ಇನ್ನೊಂದೆಡೆ ಅಡಿಕೆ ಸಂಕದ ಮೇಲೆ ಜೀವ ಕೈಯ್ಯಲ್ಲಿ ಹಿಡಿದುಕೊಂಡು ಸಾಗುತ್ತಿರುವ ಶಾಲಾ ಮಕ್ಕಳು. ಮತ್ತೊಂದೆಡೆ, ಗ್ರಾಮದ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿ ಬಳಿ ಮನವಿ ಮಾಡುತ್ತಿರುವ ಗ್ರಾಮಸ್ಥರು. ಇದೆಲ್ಲಾ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಹಗುರಮನೆ ಹಾಗೂ ಮೇಲ್ಗದ್ದೆ ಗ್ರಾಮದಲ್ಲಿ ಕಂಡುಬರುವ ದೃಶ್ಯಗಳು. ದಶಕಗಳಿಂದ ಓಡಾಟಕ್ಕೆ ಸರಿಯಾದ ರಸ್ತೆ, ಸೇತುವೆಯೂ ಇಲ್ಲದೆ ಗ್ರಾಮಸ್ಥರೆಲ್ಲ ಜಿಲ್ಲಾಧಿಕಾರಿ ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ವಾನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಗುರಮನೆ ಮತ್ತು ಮೇಲ್ಗದ್ದೆ ಗ್ರಾಮ, ಶಿರಸಿಯಿಂದ 35 ಕಿಮೀ ದೂರದಲ್ಲಿದೆ. ಈ ಗ್ರಾಮಕ್ಕೆ ಹೊಂದಿಕೊಂಡು ಬಿಳಿಹೊಳೆ ಹರಿಯುತ್ತಿದ್ದು, ಗ್ರಾಮಸ್ಥರು ಪ್ರತಿನಿತ್ಯದ ಓಡಾಡಲು ಹೊಳೆ ದಾಟಿಕೊಂಡೇ ತೆರಳಬೇಕು. ಆದರೆ ಈ ಹೊಳೆ ದಾಟಲು ಯಾವುದೇ ಪೂರಕ ವ್ಯವಸ್ಥೆಗಳಿಲ್ಲ. ಹೀಗಾಗಿ ಗ್ರಾಮಸ್ಥರು ಅಡಿಕೆ ಮರಗಳನ್ನು ಬಳಸಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗುವುದರಿಂದ ತಾತ್ಕಾಲಿಕ ಸೇತುವೆ ಮೇಲಿನ ಓಡಾಟ ಕಡಿತಗೊಳ್ಳುತ್ತದೆ. ಈ ಸಂದರ್ಭದಲ್ಲಿ ಸುಮಾರು 8 ತಿಂಗಳುಗಳ ಕಾಲ ಗ್ರಾಮಕ್ಕೆ ಹೊರಜಗತ್ತಿನ ಸಂಪರ್ಕವೇ ಕಡಿತಗೊಳ್ಳುತ್ತದೆ.
ತುರ್ತು ಸಂದರ್ಭಗಳು ಎದುರಾದರೆ, ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಅವರನ್ನು ಜೋಳಿಗೆಯಲ್ಲಿ ಹೊತ್ತು ನದಿ ದಾಟಬೇಕು. ಹೀಗಾಗಿ ಗ್ರಾಮಕ್ಕೆ ಶಾಶ್ವತ ಸೇತುವೆ ನಿರ್ಮಿಸಿಕೊಡುವಂತೆ ದಶಕಗಳಿಂದ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಹಗುರಮನೆ, ಮೇಲ್ಗದ್ದೆ ಗ್ರಾಮದಲ್ಲಿ ಸುಮಾರು 40ಕ್ಕೂ ಅಧಿಕ ಮನೆಗಳಿವೆ. ಇಲ್ಲಿನ ಬಹುತೇಕರಿಗೆ ಕೃಷಿಯೇ ಜೀವನಾಧಾರ. ಉದ್ಯೋಗ ಅರಸಿ ಹೊರಗೆ ಹೋಗುವವರ ಸಂಖ್ಯೆ ಕಡಿಮೆ. ಆದರೆ ಶಾಲಾ, ಕಾಲೇಜುಗಳಿಗೆ ತೆರಳುವ ಗ್ರಾಮದ ಸಾಕಷ್ಟು ವಿದ್ಯಾರ್ಥಿಗಳು ಕಷ್ಟಪಡುವಂತಾಗಿದೆ. ನದಿಗೆ ಸೇತುವೆ ಇಲ್ಲದ ಕಾರಣಕ್ಕೆ ಎಷ್ಟೋ ವಿದ್ಯಾರ್ಥಿಗಳು ಶಾಲೆಯನ್ನೇ ತೊರೆದ ನಿದರ್ಶನಗಳಿದ್ದು ಗ್ರಾಮಕ್ಕೆ ಸೇತುವೆ ಅತ್ಯಗತ್ಯವಾಗಿ ಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಹಿಂದೆ ಗ್ರಾಮಕ್ಕೆ ಸೇತುವೆ ನಿರ್ಮಿಸಲು ಯೋಜನೆ ಮಂಜೂರಾಗಿದ್ದು ಇನ್ನೇನು ಸೇತುವೆ ನಿರ್ಮಾಣವಾಗಬೇಕು ಎನ್ನುವಾಗಲೇ ಆ ಗ್ರಾಮದ ಸೇತುವೆ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಹೇಳಲಾಗಿದೆ. ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆಯವರ ಕ್ಷೇತ್ರವೇ ಆಗಿದ್ದರೂ ಈ ಗ್ರಾಮಸ್ಥರಿಗೆ ಸೇತುವೆ ಭಾಗ್ಯ ಮಾತ್ರ ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ಸೇತುವೆ ನಿರ್ಮಾಣವಾಗದಿದ್ದಲ್ಲಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಸತತ ನಾಲ್ಕು ಗಂಟೆ ಕಾರ್ಯಾಚರಣೆ: ಭದ್ರಾವತಿಯಲ್ಲಿ ಕೊನೆಗೂ ಸೆರೆಸಿಕ್ಕಿತು ಚಿರತೆ