ಕಾರವಾರ (ಉತ್ತರ ಕನ್ನಡ): ಪೆಟ್ರೋಲ್, ಡೀಸೆಲ್ ಬೆಲೆ ನಿತ್ಯವೂ ಏರತೊಡಗಿದೆ. ಅಡುಗೆ ಅನಿಲದ ಬೆಲೆ ಕೂಡಾ ಏರಿಕೆ ಕಂಡಿದೆ. ಇಂತಹ ಕಠಿಣ ಪರಿಸ್ಥಿತಿ ನಡುವೆ ತರಕಾರಿ ಮಾರುಕಟ್ಟೆಗಳತ್ತ ಮುಖ ಮಾಡಿದ ಗ್ರಾಹಕರಿಗೆ ತರಕಾರಿಗಳ ಬೆಲೆ ಶಾಕ್ ನೀಡಿದೆ. ದಿನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ತರಕಾರಿಗಳ ಬೆಲೆಗಳು ಗಗನಕ್ಕೇರಿವೆ. ಅತಿಯಾದ ಮಳೆಗೆ ಮತ್ತು ರೋಗ ಬಾಧೆಗೆ ಬೆಳೆಗಳ ಇಳುವರಿ ಕಡಿಮೆಯಾಗಿದ್ದು ಮಾರುಕಟ್ಟೆಗೆ ತರಕಾರಿಗಳು ಕಡಿಮೆ ಪ್ರಮಾಣದಲ್ಲಿ ಬರುತ್ತಿವೆ. ಆಂಧ್ರ ಪ್ರದೇಶ, ಮಹಾರಾಷ್ಟ್ರ ಹೀಗೆ ಹೊರ ರಾಜ್ಯಗಳಿಂದ ಹೆಚ್ಚಾಗಿ ತರಕಾರಿಗಳು ಮಾರುಕಟ್ಟೆಗೆ ಬರುತ್ತಿದ್ದವು. ಆದ್ರೀಗ ಅಲ್ಲಿಂದಲೂ ತರಕಾರಿಗಳ ರಫ್ತು ಕಡಿಮೆಯಾಗಿವೆ.
ಪೂರೈಕೆ ಕಡಿಮೆಯಿರುವ ಕಾರಣ ತರಕಾರಿಗಳ ಬೆಲೆ ಹೆಚ್ಚಾಗಿದೆ. ಕೆ.ಜಿ ಲೆಕ್ಕದಲ್ಲಿ ಮೆಣಸಿನಕಾಯಿ ಬೆಲೆ 80 ರಿಂದ 100 ರೂ., ಬೀನ್ಸ್ ಬೆಲೆ 60 ರಿಂದ 80, ಟೊಮೊಟೋ ಬೆಲೆ 30, ಒಂದು ಲಿಂಬುಗೆ 5 ರೂಪಾಯಿ ಆಗಿದೆ. ಇಂತಹ ದುಬಾರಿ ದುನಿಯಾದಲ್ಲಿ ಬಡವರು, ಮಧ್ಯಮ ವರ್ಗದವರು ಬದಕುವುದಾದರು ಹೇಗೆ ಎನ್ನುವ ಪ್ರಶ್ನೆ ಕಾಡುತ್ತಿದೆ ಎನ್ನುತ್ತಾರೆ ಗ್ರಾಹಕರು.
ಇದನ್ನೂ ಓದಿ: ಮುಖ್ಯಮಂತ್ರಿ ಬೊಮ್ಮಾಯಿ ದೆಹಲಿ ಭೇಟಿ: ರಾಜ್ಯಕ್ಕೆ ಕೇಂದ್ರದಿಂದ ಸಿಕ್ಕಿದ್ದೇನು?
ಅಲ್ಲದೇ, ತರಕಾರಿಗಳ ಬೆಲೆ ಗಗನಕ್ಕೇರಲು ಪ್ರಮುಖ ಕಾರಣ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ. ತರಕಾರಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಾಹನಗಳ ಮೂಲಕವೇ ತಲುಪಿಸಬೇಕಾಗುತ್ತದೆ. ಟ್ರಾನ್ಸ್‌ಪೋರ್ಟ್ ಚಾರ್ಜ್ ತರಕಾರಿ ಬೆಲೆ ಮೇಲೆ ಪರಿಣಾಮ ಬೀಳುತ್ತಿದೆ. ರೈತರಿಂದ ಕಡಿಮೆ ಬೆಲೆಯಲ್ಲಿ ತರಕಾರಿ ಖರೀದಿಸಿದರೂ ಕೂಡ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಆಗುತ್ತದೆ. ತೈಲ ಬೆಲೆ, ವಾಹನಗಳ ಬಾಡಿಗೆ, ಆಳುಗಳ ಕೂಲಿ ಎಲ್ಲವೂ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಅಂತಾರೆ ವ್ಯಾಪಾರಸ್ಥರು.