ಕಾರವಾರ: ಬಿಸಿ ಎಣ್ಣೆಯಲ್ಲಿ ಕೈ ಹಾಕಿ ವಡೆ ತೆಗೆದು ಅಚ್ಚರಿ ಮೂಡಿಸುವ ಸಂಪ್ರದಾಯವೊಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಕಾಮಾಕ್ಷಿ ದೇವಾಲಯದಲ್ಲಿ ನಡೆಯುತ್ತಿದೆ.
ಅಶ್ವಿನಿ ಮಾಸದ ಹುಣ್ಣಿಮೆಯಂದು ಜಾತ್ರೆ:
ಮೂಲತಃ ಗುವಾಹಟಿಯ ಕಾಮಾಕ್ಷಿ ದೇವರು ಕುಮಟಾಕ್ಕೆ ಬಂದು ನೆಲೆಸಿದ ನಂತರ, ಕಳೆದ ಹಲವಾರು ವರ್ಷಗಳಿಂದ ಅಶ್ವಿನಿ ಮಾಸದ ಹುಣ್ಣಿಮೆಯಂದು ಜಾತ್ರೆ ನಡೆಯುತ್ತಾ ಬಂದಿದೆ. ದೇವಸ್ಥಾನದಲ್ಲಿ 15 ದಿನಗಳ ಕಾಲ ಉತ್ಸವ ನಡೆಸಿ ಹದಿನೈದನೇ ದಿನ ಹುಣ್ಣಿಮೆಯಂದು ಈ ಉತ್ಸವ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಜಾತ್ರೆ ಮಾಡಲಾಗುತ್ತದೆ. ಬಾಣಲೆಯಲ್ಲಿ ಕುದಿಯುತ್ತಿರುವ ಎಣ್ಣೆಗೆ ಕೈ ಹಾಕಿ ವಡೆಯನ್ನು ಭಕ್ತರು ತೆಗೆಯೋದು ಕಾಮಾಕ್ಮಿ ದೇವಿ ಜಾತ್ರೆಯ ವಿಶೇಷ.
ವಡೆ ಹುಣ್ಣಿಮೆ ಜಾತ್ರೆ:
ಈ ಜಾತ್ರೆಯನ್ನು ಸಾಂಪ್ರದಾಯಿಕ ಭಾಷೆಯಲ್ಲಿ ವಡೆ ಹುಣ್ಣಿಮೆ ಜಾತ್ರೆ ಎಂದು ಕರೆಯುತ್ತಾರೆ. ಆದರೆ ಕೊರೊನಾ ಕಾರಣದಿಂದಾಗಿ ಜಾತ್ರೆಯನ್ನು ಕಳೆದ ಬಾರಿ ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಕೊರೊನಾ ಮುಂಜಾಗ್ರತಾ ಕ್ರಮಗಳೊಂದಿಗೆ ಆಚರಣೆಗೆ ಅವಕಾಶ ಸಿಕ್ಕಿದ್ದು ಈ ಮೊದಲಿನಂತೆ ಜಾತ್ರೆ ಜರುಗಿತು. ಜಾತ್ರೆಗೆ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ವಡೆಯನ್ನು ತೆಗೆದು ದೇವಿಗೆ ಭಕ್ತಿ ಸಮರ್ಪಿಸಿದರು.
ಹರಕೆ ಮಹಿಮೆ:
ಕುಮಟಾ ಪಟ್ಟಣದ ಗುಜರಗಲ್ಲಿಯಲ್ಲಿರುವ ಕಾಮಾಕ್ಷಿ ದೇವಿ ಜಾತ್ರೆಗೆ ಕೇವಲ ರಾಜ್ಯದಿಂದ ಅಲ್ಲದೇ ಗೋವಾ, ಮಹಾರಾಷ್ಟ್ರ, ಮುಂಬೈಯಿಂದಲೂ ಸಹ ಭಕ್ತರ ದಂಡು ಆಗಮಿಸುತ್ತದೆ. ಜಾತ್ರೆ ಸಮಯದಲ್ಲಿ ಕುದಿಯುತ್ತಿರುವ ಎಣ್ಣೆಯಲ್ಲಿ ವಡೆ ತೆಗೆಯುತ್ತೇನೆ ಎಂದು ಹರಕೆ ಹೊತ್ತಿಕೊಂಡ್ರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದು ಇಲ್ಲಿಗೆ ಆಗಮಿಸುವ ಭಕ್ತರ ನಂಬಿಕೆ.
ಭಕ್ತಿ ಸಮರ್ಪಣೆ:
ಹರಕೆ ಈಡೇರಿದ ಭಕ್ತರು ನಿನ್ನೆ ಕುದಿಯುವ ಎಣ್ಣೆಯಲ್ಲಿ ವಡೆಯನ್ನು ತೆಗೆದರು. ಹರಕೆ ತೀರಿಸುವ ಮುನ್ನ ಭಕ್ತರು 15 ದಿನಗಳ ಕಾಲ ದೇವರಿಗೆ ಸೇವೆ ಸಲ್ಲಿಸುತ್ತಾರೆ. ಇದಲ್ಲದೇ ವಡೆ ತೆಗೆಯುವ ಮೂರು ದಿನ ಮುಂಚಿತ ಮಾಂಸಹಾರ ಸೇವನೆ ಬಿಡುತ್ತಾರೆ. ಜಾತ್ರೆ ನಡೆಯುವ ದಿನ ಬೆಳಗ್ಗೆಯೇ ದೇವಸ್ಥಾನ ಆವರಣದಲ್ಲಿಯೇ ತೀರ್ಥಸ್ನಾನ ಮಾಡಿ ನಂತರ ದೇವಾಲಯದ ಅರ್ಚಕರಿಂದ ತೀರ್ಥವನ್ನು ಪಡೆದು ಎಣ್ಣೆಯಲ್ಲಿ ವಡೆಯನ್ನ ತೆಗೆಯುತ್ತಾರೆ. ಭಕ್ತಿಯಿಂದ ಕಾದಿರುವ ಎಣ್ಣೆಯಲ್ಲಿ ವಡೆ ತೆಗೆಯುವುದರಿಂದ ಯಾವ ಸುಟ್ಟ ಗಾಯಗಳು ಆಗುವುದಿಲ್ಲ. ಇದು ದೇವರ ಮೇಲಿರುವ ನಂಬಿಕೆ ಅಂತಾರೆ ಭಕ್ತರು.
ಇದನ್ನೂ ಓದಿ: 2ನೇ ಹಂತದ ಶೂಟಿಂಗ್ ಆರಂಭಿಸಿದ "ಲವ್ ಯೂ ರಚ್ಚು": ಕೊಳತೂರು ಗೇಟ್ ಬಳಿ ಫೈಟ್ ಶೂಟ್
ಕುದಿಯುವ ಎಣ್ಣೆ ಭಕ್ತರಿಗೆ ಸುಡಬಾರದೆಂಬ ಕಾರಣಕ್ಕೆ ಎಣ್ಣೆಗೆ ಇಲ್ಲಿ ಯಾವುದೇ ರಾಸಾಯನಿಕ ಪದಾರ್ಥ ಬೆರೆಸುವುದಿಲ್ಲ. ಅದಕ್ಕಾಗಿಯೇ ಜನರ ಮುಂದೆಯೇ ಎಣ್ಣೆಯನ್ನು ಸುರಿದು ಕಾದ ನಂತರ ವಡೆ ಬಿಡುತ್ತಾರೆ. ಪಟ್ಟಣದ ಶಾಂತೇರಿ ಕಾಮಾಕ್ಷಿ ದೇವಾಲಯ, ರಾಮನಾಥ ಲಕ್ಷ್ಮೀ ನಾರಾಯಣ ದೇವಾಲಯದಲ್ಲೂ ಸಹ ಭಕ್ತರು ಎಣ್ಣೆಯಲ್ಲಿ ವಡೆಯನ್ನು ತೆಗೆಯುವ ಮೂಲಕ ದೇವರಿಗೆ ಹರಕೆ ತೀರಿಸಿದರು.