ಕಾರವಾರ: ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ದೇಶದ ಜನರಲ್ಲಿ ಆತಂಕ ಸೃಷ್ಟಿಸಿದೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಕರಣ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲಾಡಳಿತ ಗೋವಾ ಗಡಿಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದೆ.
ಕೋವಿಡ್ ಮೊದಲ ಅಲೆಯಿಂದ ಸುಧಾರಿಸಿಕೊಳ್ಳುತ್ತಿರುವ ನಡುವೆಯೇ ದೇಶದಲ್ಲಿ 2ನೇ ಅಲೆ ಕಾಲಿಟ್ಟು ಹಲವರ ಸಾವಿಗೆ ಕಾರಣವಾಗಿತ್ತು. ಸದ್ಯ ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ವಿಚಾರ ಎಲ್ಲರಲ್ಲಿಯೂ ನೆಮ್ಮದಿ ತರಿಸಿತ್ತು. ಆದರೆ ಇದೀಗ ಡೆಲ್ಟಾ ಫ್ಲಸ್ ರೂಪಾಂತರಿ ವೈರಸ್ ಮತ್ತೆ ಜನರಲ್ಲಿ ಆತಂಕ ಮೂಡಿಸಿದೆ.
ಗೋವಾ ಹಾಗೂ ಮಹಾರಾಷ್ಟ್ರದಿಂದ ರಾಜ್ಯ ಪ್ರವೇಶಕ್ಕೆ ಸರಕು, ಸಾಗಾಣಿಕೆ ಮಾಡುವ ವಾಹನವನ್ನು ಬಿಟ್ಟು ಉಳಿದವರಿಗೆ ಗಡಿಯಲ್ಲಿ ನಿಷೇಧ ಹೇರಲಾಗಿದೆ. ಜತೆಗೆ ಇಂದಿನಿಂದ ಕಾರವಾರದಿಂದ ಗೋವಾ ಕಡೆ ಹೋಗುವವರನ್ನು ಚೆಕ್ ಪೋಸ್ಟ್ನಲ್ಲಿಯೇ ತಡೆದು ವಾಪಸ್ ಕಳುಹಿಸಲಾಗುತ್ತಿದೆ.
ಆರ್ಟಿ-ಪಿಸಿಆರ್ ಟೆಸ್ಟ್ ಕಡ್ಡಾಯ:
ಕಾರವಾರದಿಂದ ಕೆಲಸಕ್ಕಾಗಿ ಪ್ರತಿನಿತ್ಯ ನೂರಾರು ಜನರು ಗೋವಾಕ್ಕೆ ತೆರಳುತ್ತಾರೆ. ಆದರೆ ಡೆಲ್ಟಾ ಫ್ಲಸ್ ವೈರಸ್ ಆತಂಕದಿಂದ ರಾಜ್ಯ ಪ್ರವೇಶಕ್ಕೆ ಗೋವಾ ನಿರ್ಬಂಧ ಹೇರಿದ ಹಿನ್ನೆಲೆ ಗೋವಾಕ್ಕೆ ತೆರಳಲು ಬಂದ ಕಾರ್ಮಿಕರು ಆಕ್ರೋಶ ಹೊರಹಾಕಿದರು. ಗೋವಾ ಸರ್ಕಾರ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದು ಇದು ಗೋವಾದಲ್ಲಿ ದುಡಿಯುವ ಕಾರವಾರದ ಕಾರ್ಮಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇಂದು ಬೆಳಿಗ್ಗೆಯಿಂದ ನೂರಾರು ಜನ ತಾಲೂಕಿನ ಮಾಜಾಳಿ ಗ್ರಾಮದ ಗೋವಾ ಗಡಿಯಲ್ಲಿ ಸಾಲುಗಟ್ಟಿ ನಿಂತಿದ್ದರು. ಗೋವಾ ಸರ್ಕಾರದ ನಿಲುವಿನ ವಿರುದ್ದ ಹರಿಹಾಯ್ದಿದ್ದು, ಮಾಜಿ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ಪ್ರತಿಭಟನೆಗೆ ಸಹ ಮುಂದಾಗಿದ್ದರು. ಇದಾದ ನಂತರ ಗೋವಾ ಸರ್ಕಾರ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಎನ್ನುವ ಆದೇಶ ಮಾಡಿತ್ತು.
"ಉತ್ತರ ಕನ್ನಡ ಜಿಲ್ಲೆಯತ್ತ ಮಹಾರಾಷ್ಟ್ರದಿಂದ ಗೋವಾ ಮಾರ್ಗವಾಗಿ ಹಲವರು ಬರುತ್ತಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಹ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುವವರ ಕೈಗೆ ಸೀಲ್ ಹಾಕಿ 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುವುದು."
- ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹೆಚ್ಚಾದ Covid,Delta+ : ಗಡಿ ಜಿಲ್ಲೆಗಳಲ್ಲಿ ವಿಶೇಷ ಕಣ್ಗಾವಲಿಗೆ ಸರ್ಕಾರ ಸೂಚನೆ