ಕಾರವಾರ: ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದ ಕಡಲತೀರಗಳಲ್ಲಿ ಅಲೆಗಳ ಅಬ್ಬರ ಹೆಚ್ಚಾಗುತ್ತದೆ. ಸಮುದ್ರಕ್ಕೆ ಈಜಲು ತೆರಳಿ ಪ್ರವಾಸಿಗರು ಸಾವನ್ನಪ್ಪಿರುವ ಉದಾಹರಣೆಗಳಿವೆ. ಕೆಲ ದಿನದ ಹಿಂದೆ ಕುಮಟಾದಲ್ಲಿ ಪ್ರವಾಸಕ್ಕೆಂದು ಬಂದಿದ್ದ ನಾಲ್ವರು ವಿದ್ಯಾರ್ಥಿಗಳು ನೀರುಪಾಲಾದ ಘಟನೆಯಿನ್ನೂ ಕಣ್ಣ ಮುಂದಿದೆ. ಈ ಹಿನ್ನೆಲೆ ಪ್ರವಾಸಿಗರ ರಕ್ಷಣೆಗೆ ಪೊಲೀಸ್ ಇಲಾಖೆ ಮುಂದಾಗಿದೆ.
ಕಳೆದೆರಡು ತಿಂಗಳಲ್ಲಿ ಜಿಲ್ಲೆಯಲ್ಲಿ ಸುಮಾರು 10 ಪ್ರವಾಸಿಗರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಡಲತೀರದಲ್ಲಿ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದರೂ ಕೆಲ ದಿನಗಳ ಹಿಂದೆ ಕುಮಟಾದಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಜಿಲ್ಲೆಯಲ್ಲಿ ಮುಂದೆ ಇಂತಹ ಅನಾಹುತ ಆಗದಂತೆ ಎಚ್ಚರಿಕೆ ವಹಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಡಲತೀರದ ರೆಸಾರ್ಟ್‌ಗಳ ಮಾಲೀಕರನ್ನು ಕರೆದು ಸಭೆ ನಡೆಸಿದ್ದಾರೆ. ಅಲೆಗಳ ಅಬ್ಬರ ಇರುವ ವೇಳೆ ಯಾವುದೇ ಕಾರಣಕ್ಕೂ ಪ್ರವಾಸಿಗರನ್ನು ಕಡಲತೀರಕ್ಕೆ ಕಳುಹಿಸದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಲೈಫ್‌ಗಾರ್ಡ್‌ಗಳನ್ನು ನೇಮಕ ಮಾಡುವುದು, ಮುಂಜಾಗ್ರತೆ ಬೋರ್ಡ್ ಬರೆಸುವುದು, ಪ್ರವಾಸಿಗರಿಗೆ ಲೈಫ್ ಜಾಕೆಟ್ ಕೊಡುವುದು, ಮೆಗಾಫೋನ್ ಮೂಲಕ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡುವ ಕಾರ್ಯವನ್ನು ರೆಸಾರ್ಟ್ ಮಾಲೀಕರೇ ಮಾಡುವಂತೆ ಸೂಚನೆ ನೀಡಿದ್ದಾರೆ. ರೆಸಾರ್ಟ್ ಮಾಲೀಕರು ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಂಡಿದ್ದಾರೆ.
ಪ್ರವಾಸಿಗರಿಗೆ ಎಷ್ಟೇ ಎಚ್ಚರಿಕೆ ನೀಡಿದರೂ ಕೆಲವೊಮ್ಮೆ ಸಮುದ್ರಕ್ಕೆ ಇಳಿದು ಇಂತಹ ಅವಘಡವಾಗುತ್ತಿದೆ. ನಾಲ್ವರು ಸಾವನ್ನಪ್ಪಿದ ಘಟನೆಯಿಂದ ಈಗ ಇನ್ನಷ್ಟು ಎಚ್ಚರಿಕೆ ವಹಿಸಿದ್ದು, ಪ್ರವಾಸಿಗರ ರಕ್ಷಣೆಗೆ ನಾವು ಮುಂದಾಗುತ್ತೇವೆ. ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಶ್ರಮಿಸುತ್ತೇವೆ ಎನ್ನುತ್ತಾರೆ ರೆಸಾರ್ಟ್ ಮಾಲೀಕರುಗಳು.
ಇದನ್ನೂ ಓದಿ: ಶಿರಸಿಯಲ್ಲಿ ಮೌಲ್ಯ ಹೆಚ್ಚಿಸಿಕೊಂಡ ಹಲಸಿನಕಾಯಿ: ರೈತರ ಆರ್ಥಿಕತೆಗೆ ದೊಡ್ಡ ವರದಾನ
ಗೋಕರ್ಣ, ಮುರ್ಡೇಶ್ವರ, ಹೊನ್ನಾವರದ ಕಾಸರಕೋಡ ಕಡಲತೀರ, ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಈಗಾಗಲೇ ಜಿಲ್ಲಾಡಳಿತದಿಂದಲೇ ಲೈಫ್‌ಗಾರ್ಡ್ ಗಳನ್ನು ನೇಮಕ ಮಾಡಲಾಗಿದೆ. ರೆಸಾರ್ಟ್‌ಗಳಿರುವ ಕಡಲತೀರದಲ್ಲಿ ರೆಸಾರ್ಟ್ ಮಾಲಿಕರೇ ಪ್ರವಾಸಿಗರ ರಕ್ಷಣೆಯ ಹೊಣೆಯನ್ನ ಹೊರಬೇಕು. ಇಲ್ಲದಿದ್ದರೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎನ್ನುವ ಎಚ್ಚರಿಕೆಯನ್ನು ಪೊಲೀಸ್ ಇಲಾಖೆ ನೀಡಿದೆ.