ಕಾರವಾರ: ಆಳ ಸಮುದ್ರದಲ್ಲಿ ಲೈಟ್ಗಳನ್ನ ಬಿಟ್ಟು ಮೀನುಗಾರಿಕೆ (lights fishing) ಮಾಡುವುದನ್ನ ಕೇಂದ್ರ ಸರ್ಕಾರ ನಿಷೇಧಿಸಿತ್ತು. ಮೀನುಗಳ ಸಂತತಿಯ ಮೇಲೆ ಪರಿಣಾಮ ಬೀಳುವ ಕಾರಣ ಕೆಲವೆಡೆ ಮೀನುಗಾರರು ಸಹ ವಿರೋಧಿಸಿದ್ದರು.
ಆದರೆ, ಇದೀಗ ಅನ್ಯ ಜಿಲ್ಲೆಯ ಮೀನುಗಾರರು ಉತ್ತರ ಕನ್ನಡ ಜಿಲ್ಲೆಯಲ್ಲಿ ರಾತ್ರಿ ಸಮಯದಲ್ಲಿ ಎಗ್ಗಿಲ್ಲದೇ ಲೈಟ್ ಫಿಶಿಂಗ್ ನಡೆಸುತ್ತಿದ್ದಾರೆ. ಇನ್ನು ಅನಧಿಕೃತವಾಗಿ ನಡೆಯುವ ಈ ಲೈಟ್ ಫಿಶಿಂಗ್ ನಿಂದ ಮೀನುಗಾರರ ನಡುವೆಯೇ ಆಳ ಸಮುದ್ರದಲ್ಲಿ ಸಂಘರ್ಷಕ್ಕೆ (Fishers Conflict in Uttara Kannada coastal) ಕಾರಣವಾಗುತ್ತಿದೆ.
ಮುಸುಕಿನ ಗುದ್ದಾಟ
ಲೈಟ್ ಫಿಶಿಂಗ್ ಇದೀಗ ಉತ್ತರ ಕನ್ನಡ ಮೀನುಗಾರರ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿಯ ಮೀನುಗಾರರ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ಆಳ ಸಮುದ್ರದಲ್ಲಿ ಲೈಟ್ ಫಿಶಿಂಗ್ ಮಾಡಬಾರದೆಂದು ನಿಷೇಧ ಹೇರಿತ್ತು. ಸಮುದ್ರದಲ್ಲಿ ಲೈಟ್ಗಳನ್ನ ಬಿಟ್ಟು ಫಿಶಿಂಗ್ ಮಾಡುವುದರಿಂದ ಸಣ್ಣ ಸಣ್ಣ ಮರಿಗಳು ಬಲೆಗೆ ಬಿದ್ದು ಮುಂದಿನ ದಿನಗಳಲ್ಲಿ ಮೀನುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀಳುವುದರ ಜೊತೆಗೆ ಮೀನುಗಳ ಸಂತತಿಯ ಮೇಲೂ ಪರಿಣಾಮ ಬೀರುತ್ತದೆ.
ಇದಲ್ಲದೇ ನಾಡ ದೋಣಿ ಮೀನುಗಾರಿಕೆ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕೆ ನಿರ್ಬಂಧ ವಿಧಿಸಿತ್ತು. ಇತ್ತೀಚೆಗೆ ಭಟ್ಕಳದಲ್ಲಿ ಆಳ ಸಮುದ್ರದಲ್ಲಿಯೇ ಈ ಸಂಬಂಧ ಮೀನುಗಾರರ ನಡುವೆ ಸಂಘರ್ಷ ನಡೆದಿದೆ.
ನೆರೆಯ ಮಹಾರಾಷ್ಟ್ರದಲಿಲ್ಲ ನಿಷೇಧ- ಒಂದು ಗುಂಪಿನ ವಾದ
ಇನ್ನು ನೆರೆಯ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಲೈಟ್ ಫಿಶಿಂಗ್ ಮೇಲೆ ನಿಷೇಧ ಹೇರಿಲ್ಲ. ಇದರಿಂದ ಅಲ್ಲಿಯ ಮೀನುಗಾರರು, ರಾಜ್ಯದ ಕರಾವಳಿಗೆ ಬಂದು ಮೀನು ಹಿಡಿಯುತ್ತಿದ್ದರು. ಆಗ ರಾಜ್ಯದ ಮೀನುಗಾರರ ಹಾಗೂ ನೆರೆಯ ರಾಜ್ಯದ ಮೀನುಗಾರರ ನಡುವೆ ಸಂಘರ್ಷ ನಡೆಯುತ್ತಿತ್ತು. ಸದ್ಯ ರಾಜ್ಯದ ಒಳಗಿನ ಜಿಲ್ಲೆ ಜಿಲ್ಲೆಗಳ ನಡುವಿನ ಮೀನುಗಾರರ ನಡುವೆ ಲೈಟ್ ಫಿಶಿಂಗ್ ಸಂಘರ್ಷಕ್ಕೆ ಕಾರಣವಾಗಿದೆ.
ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಅಂತಾರೆ ಅಧಿಕಾರಿಗಳು
ಇನ್ನು ಈ ಬಗ್ಗೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಬಳಿ ಕೇಳಿದರೆ ಈ ಬಗ್ಗೆ ಕರಾವಳಿ ಕಾವಲು ಪಡೆ ಪೊಲೀಸರಿಗೆ ತಿಳಿಸಿದ್ದು, ಅನಧಿಕೃತ ಲೈಟ್ ಫಿಶಿಂಗ್ ಮಾಡುವ ಬೋಟ್ ಹಿಡಿದುಕೊಡುವಂತೆ ತಿಳಿಸಲಾಗಿದೆ. ಯಾವ ಬೋಟ್ನವರು ಸಿಕ್ಕಿದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ.
ಇನ್ನು ರಾತ್ರಿ ವೇಳೆ ಆಳ ಸಮುದ್ರದಲ್ಲಿ ಲೈಟ್ ಫಿಶಿಂಗ್ ನಡೆಯುತ್ತಿದ್ದು, ಆಳ ಸಮುದ್ರಕ್ಕೆ ತೆರಳೀ ಬೋಟ್ಗಳನ್ನ ಹಿಡಿಯೋ ಕಾರ್ಯ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗದ ಹಿನ್ನೆಲೆ ಎಗ್ಗಿಲ್ಲದೇ ಲೈಟ್ ಫಿಶಿಂಗ್ ನಡೆಯುತ್ತಿದೆ. ಸದ್ಯ ಮತ್ಸ್ಯ ಕ್ಷಾಮ ಒಂದೆಡೆಯಾದರೆ ಇನ್ನೊಂದೆಡೆ ಲೈಟ್ ಫೀಶಿಂಗ್ ನಿಂದ ಇರುವ ಸಣ್ಣ ಪುಟ್ಟ ಮೀನುಗಳನ್ನು ಹಿಡಿದು ಭವಿಷ್ಯಕ್ಕೆ ತೊಂದರೆ ತಂದಿಕೊಳ್ಳುತ್ತಿದ್ದು ಇನ್ನಾದರು ಮೀನುಗಾರಿಕೆ ಇಲಾಖೆ ಈ ಬಗ್ಗೆ ಕಠಿಣ ಕ್ರಮ ಕೈಗೊಂಡು ಲೈಟ್ ಫಿಶಿಂಗ್ ಸಂಪೂರ್ಣ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ.