ಕಾರವಾರ: ವಿಧಾನ ಪರಿಷತ್ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಯಾವುದೇ ಅಭ್ಯರ್ಥಿ/ಅವರ ಕಡೆಯವರು ಚುನಾವಣೆ ವೇಳೆ ಕೊರೊನಾ ನಿಯಮ ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಚ್ಚರಿಸಿದ್ದಾರೆ.
ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ನ.23 ರಂದು ಒಟ್ಟು 6 ಅಭ್ಯಥಿಗಳಿಂದ 9 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಎಲ್ಲವೂ ಸಿಂಧುವಾಗಿ 6 ಅಭ್ಯರ್ಥಿಗಳು ಕಣದಲಿದ್ದರು. ಆದರೆ ಶಿರಸಿಯ ಪ್ರಕಾಶ ಎನ್ನುವವರು ನಾಮಪತ್ರ ಹಿಂದೆ ಪಡೆದಿದ್ದು, ಇದೀಗ ಐದು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಿ.10ರಂದು ಬೆಳಿಗ್ಗೆ 8ರಿಂದ 4ರವರೆಗೆ ಮತದಾನ ನಡೆಯಲಿದ್ದು, 14ರಂದು ಮತ ಎಣಿಕೆ ನಡೆಯಲಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಜಿಲ್ಲೆಯಲ್ಲಿ 227 ಗ್ರಾಮ ಪಂಚಾಯಿತಿ, 11 ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ 2,929 ಮತದಾರರು ಈ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಈ ಪೈಕಿ 1,394 ಪುರುಷರು, 1,535 ಮಹಿಳೆಯರಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ 2,649 ಮತದಾರರಿದ್ದು, ಇದರಲ್ಲಿ 1,236 ಪುರುಷರು ಹಾಗೂ 1,413 ಮಹಿಳಾ ಮತದಾರರಿದ್ದಾರೆ. 280 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 158 ಪುರುಷ, 188 ಮಹಿಳಾ ಮತದಾರರಿದ್ದಾರೆ. 238 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಇದರಲ್ಲಿ 28 ಸೂಕ್ಷ್ಮ, 210 ಸಾಮಾನ್ಯ ಮತಗಟ್ಟೆಗಳಾಗಿವೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಬೇಕಾದ ಹೆಚ್ಚಿನ ಭದ್ರತೆ ಹಾಗೂ ವೀಕ್ಷಕರನ್ನು ನೇಮಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ದೂರುಗಳನ್ನು ಸ್ವೀಕರಿಸಲು ಕಂಟ್ರೋಲ್ ರೂಮ್ ಹಾಗೂ ತಾಲೂಕು ಮಟ್ಟದಲ್ಲಿ ತಾಲೂಕು ಕಂಟ್ರೋಲ್ ರೂಮ್ ತೆರೆಯಲಾಗಿದೆ. ಮೆರವಣಿಗೆ, ಪ್ರಚಾರಕ್ಕೆ ಸಂಬಂಧಿಸಿದಂತೆ ಇತರ ಚುನಾವಣಾ ಸಂಬಂಧ ಪರವಾನಿಗಿಗೆ ಜಿಲ್ಲಾ ಮಟ್ಟದಲ್ಲಿ 'ಏಕಗವಾಕ್ಷಿ' ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.