ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ 20 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾದ ಬೆನ್ನಲ್ಲೇ ಮತ್ತೆ 19 ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಸೋಂಕು ಕಾಣಿಸಿಕೊಂಡು ಕಾರವಾರದ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ಕೊರೊನಾ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಯಲ್ಲಾಪುರದ 6, ಮುಂಡಗೋಡಿನ 6, ಕಾರವಾರ 2, ದಾಂಡೇಲಿ 2, ಬಳ್ಳಾರಿಯ ಓರ್ವ ಹಾಗೂ ವಿಜಯಪುರದ ಬಸ್ ಕಂಡಕ್ಟರ್ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸೋಂಕಿತರು ಗುಣಮುಖರಾಗಿ ಬಿಡುಗಡೆಯಾದ ಬೆನ್ನಲ್ಲೇ ಜಿಲ್ಲೆಯಲ್ಲಿ 19 ಮಂದಿಗೆ ಸೋಂಕು ದೃಢಗಿದೆ. ಅದರಲ್ಲಿ ಭಟ್ಕಳದ ತಲಾ ಮೂವರು ಬಾಲಕಿಯರು ಹಾಗೂ ಬಾಲಕರು, ಇಬ್ಬರು ಯುವಕರು, ಮೂವರು ಯುವತಿಯರು ಹಾಗೂ ಇಬ್ಬರು ಮಹಿಳೆಯರು ಸೇರಿ 13 ಮಂದಿಗೆ ಸೋಂಕು ತಗುಲಿದೆ. ಉಳಿದಂತೆ ಯಲ್ಲಾಪುರದ ಮೂವರು ಪುರುಷರು, ಹಳಿಯಾಳದ ಇಬ್ಬರು ಮಹಿಳೆಯರು ಹಾಗೂ ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೃದ್ಧೆಗೂ ಸೋಂಕು ಇರುವುದು ಪತ್ತೆಯಾಗಿದೆ.
ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 489 ಪ್ರಕರಣಗಳು ಪತ್ತೆಯಾಗಿದ್ದು, 204 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸಾವನ್ನಪ್ಪಿದ್ದು, 283 ಮಂದಿಗೆ ಚಿಕಿತ್ಸೆ ಮುಂದುವರೆದಿದೆ.