ಕಾರವಾರ: ಅಪರಿಚಿತ ವ್ಯಕ್ತಿಯೋರ್ವ ಸುಟ್ಟ ಆಯಿಲ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋಕರ್ಣದಲ್ಲಿ ನಡೆದಿದೆ.
ಕಳೆದ ಕೆಲ ದಿನಗಳಿಂದ ಗೋಕರ್ಣದಲ್ಲಿ ಒಬ್ಬಂಟಿಯಾಗಿ ಕಾಣಿಸಿಕೊಂಡಿದ್ದ ವ್ಯಕ್ತಿ, ಇಂದು ನಗರದ ಬಸ್ ನಿಲ್ದಾಣದಲ್ಲಿ ಸುಟ್ಟ ಆಯಿಲ್ ಕುಡಿದು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಆಂಬುಲೆನ್ಸ್ ಮೂಲಕ ಕುಮಟಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದರು.
ಆದರೆ ಅತಿಯಾಗಿ ಸುಟ್ಟ ಆಯಿಲ್ ಕುಡಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ. ಚಿಕಿತ್ಸೆ ವೇಳೆ ವೈದ್ಯರು ಹೆಸರನ್ನು ವಿಚಾರಿಸಿದಾಗ ಆನಂದ ಕೋಟೆಶ್ವರ ಎಂದು ಹೇಳಿದ್ದಾನೆಂದು ತಿಳಿದು ಬಂದಿದೆ. ಆದರೆ ಈತನ ವಿಳಾಸ ಸೇರಿದಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಮೃತದೇಹದ ಮರಣೋತ್ತರ ಪರೀಕ್ಷೆ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಲಾಗಿದ್ದು, ಈ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ವ್ಯಕ್ತಿಯ ಬಗ್ಗೆ ಯಾರಿಗಾದರೂ ಪರಿಚಯ ಇದ್ದರೆ ಕೂಡಲೇ ಕುಮಟಾ ಇಲ್ಲವೇ ಗೋಕರ್ಣ ಪೊಲೀಸ್ ಠಾಣೆಗೆ ಮಾಹಿತಿ ನಿಡುವಂತೆ ಪೊಲೀಸರು ಕೋರಿದ್ದಾರೆ.