ಕಾರವಾರ (ಉತ್ತರ ಕನ್ನಡ): ಇಲ್ಲಿನ ಹೊನ್ನಾವರ ಬಳಿ ಕಡಲತೀರದಲ್ಲಿ ಕಳೆದೊಂದು ವಾರದ ಹಿಂದೆ ಬೃಹತ್ ತಿಮಿಂಗಿಲದ ಕಳೇಬರ ಪತ್ತೆಯಾದ ಬೆನ್ನಲ್ಲೇ ಶನಿವಾರ ಮತ್ತೆರಡು ತಿಮಿಂಗಿಲಗಳ ಕಳೇಬರ ಪತ್ತೆಯಾಗಿವೆ. ಆದರೆ ಈ ಸರಣಿ ತಿಮಿಂಗಲಗಳ ಸಾವು ಇದೀಗ ಕಡಲಜೀವಶಾಸ್ತ್ರಜ್ಞರಲ್ಲಿ ಕಳವಳ ಸೃಷ್ಟಿಸಿದ್ದು, ಅಧ್ಯಯನದ ಮೂಲಕ ಕಾರಣ ಪತ್ತೆಗೆ ಮುಂದಾಗಿದ್ದಾರೆ.
ಹೌದು, ಹೊನ್ನಾವರದ ಮುಗಳಿ ಕಡಲತೀರದಲ್ಲಿ ಕಳೆದ ಭಾನುವಾರ ಸುಮಾರು 35 ಮೀ. ಉದ್ದದ ಗಂಡು ತಿಮಿಂಗಿಲದ ಕಳೇಬರವೊಂದು ದಡದಲ್ಲಿ ಪತ್ತೆಯಾಗಿತ್ತು. ಮೃತಪಟ್ಟು ಹಲವು ದಿನಗಳ ಬಳಿಕ ಅರಬ್ಬಿ ಸಮುದ್ರದಲ್ಲಿ ತೇಲಿ ಬಂದ ಕಳೇಬರ ಹೊನ್ನಾವರದ ಮುಗಳಿ ಕಡಲತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿತ್ತು. ಈ ಬಗ್ಗೆ ತಿಳಿದ ಹೊನ್ನಾವರ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅದರಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಳೇಬರ ಪರಿಶೀಲಿಸಿ ಮರಣೋತ್ತರ ಪರೀಕ್ಷೆ ಬಳಿಕ ಅಲ್ಲೀಯೇ ಹೂತಿದ್ದರು.
ಆದರೆ ಹೀಗೆ ಸಾವನ್ನಪ್ಪಿ ವಾರ ಕಳೆಯುವ ಮುನ್ನವೇ ಶನಿವಾರ ಬೆಳಗ್ಗೆ ಹೊನ್ನಾವರದ ಟೊಂಕಾ ಕಾಸರಕೋಡು ಕಡಲತೀರದ ಬಳಿ ಹೆಣ್ಣು ತಿಮಿಂಗಿಲದ ಕಳೇಬರ ಪತ್ತೆಯಾಗಿದೆ. ಇದು ಕೂಡ ಭಾರೀ ಗಾತ್ರದ್ದಾಗಿದ್ದು, ಸುಮಾರು 25 ಮೀ. ಉದ್ದವಿದೆ. ಆದರೆ ಅರಣ್ಯಾಧಿಕಾರಿಗಳು ಹಾಗೂ ಕಡಲ ವಿಜ್ಞಾನಿಗಳು ಪರಿಶೀಲನೆಗೆ ತೆರಳಿದ್ದ ವೇಳೆ ಈ ಹೆಣ್ಣು ತಿಮಿಂಗಿಲ ಸಿಕ್ಕ ಅನತಿ ದೂರದಲ್ಲೇ ಇನ್ನೊಂದು ಮರಿ ತಿಮಿಂಗಿಲದ ಕಳೇಬರ ಸಿಕ್ಕಿದೆ ಎನ್ನಲಾಗಿದೆ. ಸದ್ಯ ಇವೆರಡೂ ತಿಮಿಂಗಿಲಗಳ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗುತ್ತಿದ್ದು, ಮರಣೋತ್ತರ ಪರೀಕ್ಷಾ ವರದಿಯ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.
ಇನ್ನು, ಈ ಬಗ್ಗೆ ಕಡಲ ಜೀವಶಾಸ್ತ್ರಜ್ಞ ಡಾ. ಶಿವಕುಮಾರ್ ಹರಗಿ ಮಾತನಾಡಿ, ತಿಮಿಂಗಿಲಗಳ ಕಳೇಬರ ಪೂರ್ತಿ ಕೊಳೆತಿರುವ ಕಾರಣ ಸಾವಿಗೆ ಕಾರಣ ಇನ್ನೂ ತಿಳಿದುಬರುತ್ತಿಲ್ಲ. ಆದರೆ ಒಂದೇ ವಾರದಲ್ಲಿ ಮೂರು ಕಳೇಬರ ದೊರೆತಿರುವುದು ಗಂಭೀರವಾಗಿದೆ. ಈ ಬಗ್ಗೆ ಅಧ್ಯಯನ ಮಾಡಬೇಕಿದೆ. ಸಿಕ್ಕ ಮೂರೂ ತಿಮಿಂಗಿಲಗಳು ಬಲೀನ್ ವ್ಹೇಲ್ ಜಾತಿಯದ್ದಾಗಿವೆ. ಸತ್ತು ಮೂರ್ನಾಲ್ಕು ದಿನಗಳ ಬಳಿಕ ಕಡಲತೀರಕ್ಕೆ ಬಂದಿವೆ. ಇವು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್ 1ರಲ್ಲಿ ಬರುವ ಕಾರಣ ಇವುಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಧ್ಯಯನ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ತಿಮಿಂಗಿಲಗಳ ಮಿಲನದ ಕಾಲ: ಗಂಡು, ಹೆಣ್ಣು ಹಾಗೂ ಮರಿಗಳ ಕಳೇಬರ ದೊರೆತಿರುವುದರ ಬಗ್ಗೆ ಮಾತನಾಡಿದ ಕಡಲ ವಿಜ್ಞಾನಿ ಡಾ.ಪ್ರಕಾಶ್ ಮೇಸ್ತಾ, "ಇವು ಮಿಲನಕ್ಕೆಂದು ಶಾಂತ ಸಮುದ್ರಕ್ಕೆ ಬಂದಾಗ ಯಾವುದೋ ಬೃಹತ್ ಹಡಗುಗಳು ಡಿಕ್ಕಿಯಾಗಿ ಸಾವನ್ನಪ್ಪಿರುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ ಬಳಿಕವೇ ನಿಖರ ಕಾರಣ ತಿಳಿಯಲಿದೆ" ಎಂದಿದ್ದಾರೆ.
ಇದನ್ನೂ ಓದಿ: ಗಂಗಾವಳಿ ಸೇತುವೆ ಮೇಲೆ ಓಡಾಟಕ್ಕೆ ಜನರಿಗೆ, ದ್ವಿಚಕ್ರ ವಾಹನಗಳಿಗೆ ಅವಕಾಶ: ಗ್ರಾಮಸ್ಥರು ಸಂತಸ