ಕಾರವಾರ: ಲಾರಿ ಮೇಲ್ಭಾಗದಲ್ಲಿ ಮೂಟೆಗಳನ್ನು ಇಟ್ಟು ಸುತ್ತಲೂ ತಾಡಪತ್ರೆಯಿಂದ ಪ್ಯಾಕ್ ಮಾಡಿ ಒಳಗೆ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 8 ಜಾನುವಾರುಗಳನ್ನು ರಕ್ಷಿಸಿ ಇಬ್ಬರನ್ನು ವಶಕ್ಕೆ ಪಡೆದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.
ಯಾವುದೇ ಅಧಿಕೃತ ಪಾಸ್ ಪರ್ಮಿಟ್ ಹೊಂದದೇ ಲಾರಿಯೊಂದನ್ನು ತಾಡಪತ್ರೆಯಲ್ಲಿ ಪ್ಯಾಕ್ ಮಾಡಿಕೊಂಡು ತೆರಳುತ್ತಿರುವಾಗ ಹೊನ್ನಾವರದಲ್ಲಿ ಪೊಲೀಸರು ತಡೆದಿದ್ದರು. ಅಲ್ಲದೇ ಲಾರಿ ಪ್ಯಾಕಿಂಗ್ ಬಗ್ಗೆ ಅನುಮಾನಗೊಂಡ ಪೊಲೀಸರು ಬಿಚ್ಚಿಸಿದ್ದಾರೆ. ಈ ವೇಳೆ 5 ಕೋಣ ಮತ್ತು 3 ಗೂಳಿಗಳನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ತಕ್ಷಣ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.
ಆರೋಪಿತರನ್ನು ಗುಜರಾತ್ನ ತಹಶೀಲ ಪಟಾನ ಜಿಲ್ಲೆಯ ಲಕ್ಷ್ಮೀಪುರದ ಅಸ್ಥಾಕಬಾಯ್, ಜೂನೈದಬಾಯ್ ಎಂದು ಗುರುತಿಸಲಾಗಿದೆ. ಜಾನುವಾರುಗಳನ್ನು ಮಹಾರಾಷ್ಟ್ರದಿಂದ ಭಟ್ಕಳ ತಾಲೂಕಿಗೆ ವಧೆ ಮಾಡುವ ಸಲುವಾಗಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದರು. ಹೊನ್ನಾವರದ ಗೇರುಸೋಪ್ಪದ ಸರ್ಕಲ್ ಹತ್ತಿರ ಇರುವ ಪೊಲೀಸ್ ಚೆಕ್ ಪೋಸ್ಟ್ನಲ್ಲಿ ವಾಹನ ತಪಾಸಣೆ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 10 ಸಾವಿರಕ್ಕೆ ಗಂಡ - ಹೆಂಡ್ತಿ ಮಧ್ಯೆ ಜಗಳ.. ಕೆರೆಗೆ ಹಾರಿ ಪ್ರಾಣ ಬಿಟ್ಟ ನಾಲ್ವರು!