ಕಾರವಾರ: ಗೋವಾದಿಂದ ಹೈದರಾಬಾದ್‌ಗೆ ಸಾಗಿಸುತ್ತಿದ್ದ ಅಕ್ರಮ ಮದ್ಯವನ್ನು ಕಾರವಾರ ಪೊಲೀಸರು ಹಿಡಿದಿದ್ದಾರೆ. ಅಕ್ರಮ ಮದ್ಯವನ್ನು ಕಂಟೇನರ್ ಲಾರಿಯಲ್ಲಿ ಸಾಗಿಸುತ್ತಿದ್ದ ಓರ್ವನನ್ನು ಬಂಧಿಸಲಾಗಿದೆ ಮತ್ತು 26.29 ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ವ್ಯಕ್ತಿ ಮಹಾರಾಷ್ಟ್ರದ ಪಿಂಪ್ಲೇವಾಡಿ ಮೂಲದ ಸುಧಾಕರ್ ಗೋಲಾಂಡೆ ಎಂದು ತಿಳಿದು ಬಂದಿದೆ.
ಗೋವಾದಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ಗೋವಾ ಮದ್ಯ ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ನಾ ಫೆನ್ನೇಕರ್ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಬದರಿನಾಥ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯ ಜಿಲ್ಲಾ ವಿಶೇಷ ವಿಭಾಗದ ಪಿ.ಎಸ್.ಐ ಪ್ರೇಮನಗೌಡ ಪಾಟೀಲ್ ನೇತೃತ್ವದ ತಂಡ ಬಿಣಗಾದ ಬಳಿ ಕಂಟೇನರ್ ಲಾರಿ ತಡೆದು ತಪಾಸಣೆ ನಡೆಸಿದೆ.
ಲಾರಿಯಲ್ಲಿ ಇದ್ದ ಸುಮಾರು 26,29,536 ರೂಪಾಯಿ ಮೌಲ್ಯದ 30,212 ಗೋವಾ ರಾಜ್ಯದ ಮದ್ಯದ ಬಾಟಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮದ್ಯವನ್ನು ಅಕ್ರಮವಾಗಿ ಹೈದರಾಬಾದ್‌ಗೆ ಸಾಗಿಸಲಾಗುತ್ತಿತ್ತುಎಂಬುದಾಗಿ ಬಂಧಿತ ಆರೋಪಿ ಬಾಯಿಬಿಟ್ಟಿದ್ದಾನೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ರಾಘವೇಂದ್ರ ನಾಯ್ಕ, ಭಗವಾನ ಗಾಂವಕರ, ಸಂತೋಷಕುಮಾರ ಕೆ.ಚಿ, ಚಾಲಕ ಉಮೇಶಗಾಳರವರ ತಂಡ ಭಾಗವಹಿಸಿತ್ತು.
ಇದನ್ನೂ ಓದಿ : ಶಿವಮೊಗ್ಗ ಪೊಲೀಸರ ಮಿಂಚಿನ ಕಾರ್ಯಾಚರಣೆ.. ಕೊಲೆಗೆ ಸ್ಕೆಚ್ ಹಾಕಿದ್ದ ಆರೋಪಿಗಳು ಅರೆಸ್ಟ್