ಭಟ್ಕಳ (ಉ.ಕ): ಕೃಷಿಯಲ್ಲಿ ಆಧುನಿಕ ಯಂತ್ರಗಳ ಬಳಕೆಯ ನಿಟ್ಟಿನಲ್ಲಿ ರೈತರಿಗೆ ಸೂಕ್ತ ತರಬೇತಿ ನೀಡಲಾಗುತ್ತಿದ್ದು, ಶಿರಾಲಿಯ ತಟ್ಟಿಹಕ್ಕಲಿನ ರೈತ ದತ್ತಾತ್ರೇಯ ದೇವಾಡಿಗ ಅವರ ಜಮೀನಿನಲ್ಲಿ ಯಾಂತ್ರೀಕರಣದಿಂದ ಭತ್ತದ ನಾಟಿ ಮಾಡುವ ಕುರಿತು ತರಬೇತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಯೋಜನೆಯ ರಾಜ್ಯ ಕೃಷಿ ನಿರ್ದೇಶಕ ಮನೋಜ್, ನಮ್ಮ ಜೀವನಕ್ಕೆ ಭತ್ತದ ಬೆಳೆ ಅನಿವಾರ್ಯವಾಗಿದೆ. ಹಿಂದೆ ಕೃಷಿಯಲ್ಲಿ ಜನರೇ ತೊಡಗುತ್ತಿದ್ದರು ಈಗ ಯಂತ್ರಗಳ ಮೊರೆಹೋಗಬೇಕಾಗಿದೆ. ಇಂದು ಎಲ್ಲ ರೀತಿಯ ಕೃಷಿಯಲ್ಲೂ ಯಂತ್ರಗಳ ಬಳಕೆ ಹೆಚ್ಚಾಗಿದೆ ಎಂದರು.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಂತ್ರಶ್ರೀ ಕಾರ್ಯಕ್ರಮದಡಿಯಲ್ಲಿ ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿ ಯಂತ್ರದ ಮೂಲಕ ನಾಟಿ ಮಾಡಿಸುವ ಯೋಜನೆಯನ್ನು ಹೊಂದಿದ್ದೇವೆ. ಇಂದು ಚಿಕ್ಕ ಯಂತ್ರದ ಮೂಲಕ ಅತಿ ಸುಲಭದಲ್ಲಿ ನಾಟಿ ಮಾಡಬಹುದಾಗಿದ್ದು ಅದನ್ನು ನಡೆಸುವುದಕ್ಕಾಗಿ ತರಬೇತಿಯನ್ನು ನೀಡುತ್ತಿದ್ದೇವೆ. ಕರಾವಳಿಯಲ್ಲಿ ಭತ್ತದ ಬೆಳೆಗೆ ಅತ್ಯಂತ ಮಹತ್ವವಿದ್ದು ಅದನ್ನು ಉಳಿಸಿ ಬೆಳೆಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.
ಈ ವೇಳೆ ಮಾತನಾಡಿದ ಯೋಜನಾಧಿಕಾರಿ ಎಂ.ಎಸ್ ಈಶ್ವರ, ಕೃಷಿಗಾಗಿ ಒಂದು ವಿಭಾಗವೇ ಇದ್ದು ಎಲ್ಲ ರೈತರ ಹಿತ ಕಾಪಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದರು. ರೈತರು ಹೆಚ್ಚು ಹೆಚ್ಚು ಯಂತ್ರಗಳನ್ನು ಉಪಯೋಗಿಸುವ ಮೂಲಕ ಲಾಭದಾಯಕ ಕೃಷಿಯತ್ತ ಮುಖ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಯೋಜನೆಯ ಉತ್ತರ ಕನ್ನಡ ಜಿಲ್ಲಾ ನಿರ್ದೇಶಕರುಗಳಾದ ಶಂಕರ ಶೆಟ್ಟಿ, ಶೇಖರ ಗೌಡ, ಉಡುಪಿ ಪ್ರಾದೇಶಿಕ ಸಮನ್ವಯಾಧಿಕಾರಿ ಅಶೋಕ ಕುಮಾರ್, ಯೋಜನಾಧಿಕಾರಿ ಲವ ಕುಮಾರ್, ಯಾಂತ್ರೀಕೃತ ಕೃಷಿ ಯೋಜನಾಧಿಕಾರಿ ವಿನೋದ್, ಉಡುಪಿ-ಕರಾವಳಿ ಭಾಗದ ಸಮನ್ವಯಾಧಿಕಾರಿ ಅಶೋಕ, ಯಂತ್ರ ವಿಭಾಗದ ಮಾನ್ಸಿಫ್ ಉಪಸ್ಥಿತರಿದ್ದರು.