ಭಟ್ಕಳ: ಅಕ್ರಮವಾಗಿ ಎತ್ತುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಭಟ್ಕಳ ನಗರ ಠಾಣೆಯ ಪೊಲೀಸರು ಭಾನುವಾರ ಇಲ್ಲಿನ ಬಂದರ್ ರೋಡ್ 6ನೇ ಕ್ರಾಸ್ ಸಮೀಪ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಾದ ಮೋಹಿದ್ದೀನ್ ಪಾತೀಮಿ, ಹನೀಫ್ ಹಾಗೂ ವಾಹನ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಇವರು ಇಚರ್ ವಾಹನದಲ್ಲಿ 6 ಲಕ್ಷಕ್ಕೂ ಅಧಿಕ ಮೌಲ್ಯದ 9 ದೊಡ್ಡ ದೊಡ್ಡ ಎತ್ತುಗಳನ್ನು ಪಾಸ್, ಪರವಾನಿಗೆ ಇಲ್ಲದೆ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಾಟ ಮಾಡುತ್ತಿದ್ದರು.
ಈ ಕುರಿತು ಖಚಿತ ಮಾಹಿತಿ ಮೇರೆಗೆ ಭಟ್ಕಳ ನಗರ ಠಾಣೆ ಪೊಲೀಸರು ಬಂದರ್ ರೋಡ್ 6 ನೇ ಕ್ರಾಸ್ ಸಮೀಪ ದಾಳಿ ಮಾಡಿ ವಾಹನ ಸಮೇತ 9 ಎತ್ತುಗಳನ್ನು ರಕ್ಷಣೆ ಮಾಡಿದ್ದಾರೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.