ಕಾರವಾರ: ರಾಜ್ಯದಲ್ಲಿಯೇ ವಿಶಾಲವಾದ ಕಡಲತೀರ ಹೊಂದಿರುವ ಜಿಲ್ಲೆ ಉತ್ತರಕನ್ನಡ. ಇಲ್ಲಿನ ಬೀಚ್‌ಗಳಲ್ಲಿ ಈಜಾಡಿ ಎಂಜಾಯ್ ಮಾಡೋದಕ್ಕೆ ಅಂತಾನೇ ನಾನಾ ಕಡೆಗಳಿಂದ ಪ್ರವಾಸಿಗರ ದಂಡು ಹರಿದುಬರುತ್ತದೆ. ಆದರೆ ಹೀಗೆ ಬಂದವರು ಕಡಲತೀರಗಳ ಆಳ ಅಪಾಯ ತಿಳಿಯದೇ ಮೋಜು, ಮಸ್ತಿಯಲ್ಲಿ ತೊಡಗಿ ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿರುವ ಕಾರವಾರ, ಗೋಕರ್ಣ, ಮುರುಡೇಶ್ವರ ಬೀಚ್ಗಳು ಪ್ರವಾಸಿಗರಿಗೆ ಹಾಟ್ ಫೇವರಿಟ್. ಬೀಚ್‌ಗಳಲ್ಲಿ ಮೋಜು ಮಾಡೋದಕ್ಕೆ ಅಂತಾನೆ, ರಾಜ್ಯ ಮಾತ್ರವಲ್ಲದೆ ದೇಶ-ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಆದರೆ, ಇಲ್ಲಿಗೆ ಬರುವ ಬಹುತೇಕರಿಗೆ ಸಮುದ್ರದ ಅಲೆ, ಆಳಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಕಳೆದೊಂದು ವಾರದಲ್ಲೇ ಐದಕ್ಕೂ ಹೆಚ್ಚು ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಸಾಲ ಕೊಟ್ಟು ಪ್ರಾಣ ಕಳೆದುಕೊಂಡ ಸ್ನೇಹಿತ: ಹಣ ಕೇಳಿದಕ್ಕೆ ಗೆಳೆಯನಿಗೆ ಮುಹೂರ್ತವಿಟ್ಟ ಪಾಪಿಗಳು
ಕಡಲ ತೀರದಲ್ಲಿ ಲೈಫ್ ಗಾರ್ಡ್ಗಳು ಎಚ್ಚರಿಕೆ ನೀಡುತ್ತಿದ್ದರೂ, ಇಂಥ ದುರಂತಗಳು ಸಂಭವಿಸುತ್ತಲೇ ಇರುತ್ತವೆ. ಗೋಕರ್ಣದ ಮುಖ್ಯ ಕಡಲತೀರ, ಓಂ ಬೀಚ್ ಹಾಗೂ ಕುಡ್ಲೇ ಬೀಚ್‌ನಲ್ಲಿ ಅಲೆಗಳ ಸೆಳೆತ ಹೆಚ್ಚಿದ್ದು, ಈಜುಗಾರರಿಗೂ ಅಪಾಯಕಾರಿಯಾಗಿವೆ.