ಕಾರವಾರ: ತಾಲೂಕಿನ ದೇವಭಾಗ ಕಡಲತೀರದಲ್ಲಿ ಕಡಲಾಮೆ ಮೊಟ್ಟೆ ಇಟ್ಟ ಗೂಡೊಂದು ಕಂಡು ಬಂದಿದ್ದು, ಅದರಲ್ಲಿ ಬರೋಬ್ಬರಿ 211 ಮೊಟ್ಟೆಗಳು ಪತ್ತೆಯಾಗಿವೆ. ಕಡಲತೀರದಲ್ಲಿ ಕಡಲಾಮೆ ಮೊಟ್ಟೆ ಇಟ್ಟಿರುವ ಬಗ್ಗೆ ತಿಳಿದ ಮೀನುಗಾರರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬಳಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತಕುಮಾರ ಕೆ.ಸಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ್ ಕೆ.ಸಿ. ಸಂಶೋಧನ ವಿದ್ಯಾರ್ಥಿಗಳಾದ ಸೂರಜ್, ಶಾನ್ ನವಾಜ್, ಅಕ್ಷಯ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದೇವಭಾಗ ಕಡಲತೀರದಲ್ಲಿ ಈ ವರ್ಷ ಪತ್ತೆಯಾದ ನಾಲ್ಕನೇ ಗೂಡು ಇದಾಗಿದೆ. ಕಡಲಾಮೆಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ಸಂರಕ್ಷಿಸಲ್ಪಟ್ಟಿದ್ದು, ಸಮುದ್ರ ಆಹಾರ ಸರಪಳಿಯಲ್ಲಿ ತಮ್ಮದೇ ಸ್ಥಾನ ಹೊಂದಿವೆ. ಮೀನುಗಾರರ ಸಹಕಾರದಿಂದ ಕಡಲಾಮೆ ಮೊಟ್ಟೆಗಳ ಸಂರಕ್ಷಣೆ ಸಾಧ್ಯವಾಗುತ್ತಿದೆ. ಮೊಟ್ಟೆ ಇಟ್ಟ ಬಗ್ಗೆ ಮಾಹಿತಿ ನೀಡಿದವರಿಗೆ ಇಲಾಖೆ ವತಿಯಿಂದ 1 ಸಾವಿರ ರೂ ಗೌರವ ಧನ ಕೂಡ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಡಲಾಮೆಗಳಿಗೆ 100 ವರ್ಷಗಳ ಜೀವಿತಾವಧಿ: 100 ವರ್ಷಗಳ ಜೀವಿತಾವಧಿಯನ್ನು ಹೊಂದಿರುವ ಆಮೆಗಳು ಮೂಲಭೂತವಾಗಿ ವಲಸೆ ಹೋಗುತ್ತವೆ. ಆದರೆ ಸಂತಾನಾಭಿವೃದ್ಧಿ ಅವಧಿಯಲ್ಲಿ ಹೆಣ್ಣಾಮೆಗಳು ದಡ ಸೇರುತ್ತವೆ. ಒಣ ಮರಳಿನಲ್ಲಿ 12 ರಿಂದ 20 ಇಂಚು ಆಳದ ರಂಧ್ರಗಳನ್ನು ಕೊರೆದು ಅಲ್ಲಿ ಸುಮಾರು 100-150 ಮೊಟ್ಟೆಗಳನ್ನಿಡುತ್ತವೆ. ಆದಾಗ್ಯೂ, ಬದುಕುಳಿಯುವಿಕೆಯ ಪ್ರಮಾಣ ತುಂಬಾ ಕಡಿಮೆ. ಕೇವಲ 1 ಪ್ರತಿಶತದಷ್ಟು (100 ರಲ್ಲಿ ಒಂದು ಮಾತ್ರ ಬದುಕುಳಿಯುತ್ತವೆ) ಮೊಟ್ಟೆಗಳು ಅಥವಾ ಮೊಟ್ಟೆಯೊಡೆದ ಮರಿಗಳನ್ನು ವಿವಿಧ ಭೂ ಮತ್ತು ವೈಮಾನಿಕ ಪರಭಕ್ಷಕಗಳು ತಿನ್ನುತ್ತವೆ. ಸಮುದ್ರ ಆಮೆಗಳು ಸಮತೋಲಿತ ಸಾಗರ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಅವಶ್ಯಕ. ಏಕೆಂದರೆ, ಅವು ಸತ್ತ ಮೀನು ಮತ್ತು ಸೀಗ್ರಾಸ್ ಅನ್ನು ಸೇವಿಸುವ ಮೂಲಕ ಸಮುದ್ರದ ನೀರನ್ನು ಸ್ವಚ್ಛವಾಗಿರಿಸಿಕೊಳ್ಳುತ್ತವೆ.
ಕಡಲಾಮೆ ಸಂರಕ್ಷಣೆಗೆ ನಿಂತ ಅರಣ್ಯ ಇಲಾಖೆ: ಉತ್ತರ ಕನ್ನಡ ಜಿಲ್ಲೆಯ ಕಡಲ ತೀರದಲ್ಲಿ ಹೆಚ್ಚಾಗಿ ಕಂಡು ಬರುವ ಕಡಲಾಮೆಗಳನ್ನು ಜಿಲ್ಲೆಯ ಅರಣ್ಯ ಇಲಾಖೆ ಸಂರಕ್ಷಿಸುವ ಕೆಲಸ ಮಾಡುತ್ತಿದೆ. ಇದರಿಂದ ಕಡಲಾಮೆ ಸಂತತಿ ಹೆಚ್ಚಲು ಅನುಕೂಲಕರ ವಾತಾವರಣ ಕಲ್ಪಿಸಿದೆ.
ಹೊನ್ನಾವರದ ಕಾಸರಕೋಡು, ಟೊಂಕ, ಕಾರವಾರದ ದೇವಭಾಗ ಸೇರಿದಂತೆ ಕಡಲತೀರ ಪ್ರದೇಶದಲ್ಲಿ ಓಲಿವ್ ರಿಡ್ಲ್ ಹೆಸರಿನ ಪ್ರಬೇಧದ ಅಳಿವಿನಂಚಿನಲ್ಲಿರುವ ಕಡಲಾಮೆಗಳು ಮೊಟ್ಟೆಯಿಡುತ್ತವೆ. ಅರಣ್ಯ ಇಲಾಖೆ ಅಧಿಕಾರಿಗಳು ಆಮೆಗಳು ಕಡಲತೀರದಲ್ಲಿ ಇಡುವ ಮೊಟ್ಟೆಗಳನ್ನ ನಾಯಿ ಇನ್ನಿತರ ಪ್ರಾಣಿಗಳ ಪಾಲಾಗದಂತೆ ರಕ್ಷಣೆಗೆ ವ್ಯವಸ್ಥೆ ಮಾಡಿದ್ದು ಮೊಟ್ಟೆ ಇರಿಸಿದ ಪ್ರದೇಶದಲ್ಲೇ ಕಬ್ಬಿಣದ ಜಾಲರಿಯನ್ನು ಅಳವಡಿಸಿಟ್ಟಿದ್ದಾರೆ. ಇದರಿಂದ ಮೊಟ್ಟೆಗಳು ಸುರಕ್ಷಿತವಾಗಿರುತ್ತಿದ್ದು, ಈವರೆಗೆ ಸಾವಿರಾರೂ ಮೊಟ್ಟೆಗಳನ್ನು ರಕ್ಷಿಸಿ ಮರಿಗಳನ್ನು ಕಡಲಿಗೆ ಬಿಟ್ಟಿದ್ದಾರೆ.
ಹೊನ್ನಾವರದ ಕಾಸರಕೋಡು ಭಾಗದಲ್ಲಿ ಮೊದಲಿನಿಂದಲೂ ಅಪರೂಪದ ಓಲಿವ್ ರಿಡ್ಲ್ ಪ್ರಬೇಧದ ಆಮೆಗಳು ಫೆಬ್ರವರಿಯಿಂದ ಮೊಟ್ಟೆಯಿಡಲು ಬರುತ್ತವೆ. ಜೂನ್ ತಿಂಗಳಲ್ಲಿ ಬಹುತೇಕ ಈ ಜಾತಿಯ ಆಮೆಗಳ ಮೊಟ್ಟೆಗಳು ಮರಿಯಾಗಿ ಸಮುದ್ರ ಸೇರುತ್ತವೆ. ಈ ಹಿಂದೆ ಬಂದರು ಚಟುವಟಿಕೆ, ಜನರ ಸಂಚಾರದಿಂದಾಗಿ ಈ ಭಾಗದಲ್ಲಿ ಆಮೆಗಳು ಮೊಟ್ಟೆ ಇಟ್ಟು ಮರಿ ಮಾಡುವುದನ್ನು ಕಡಿಮೆ ಮಾಡಿದ್ದವು. ಅಲ್ಲದೆ ಸಾಕಷ್ಟು ಬಾರಿ ಮೊಟ್ಟೆಗಳು ನಾಯಿ ಹಾಗೂ ಕಳ್ಳರ ಪಾಲಾಗುತಿದ್ದವು. ಆದರೆ ಅರಣ್ಯ ಇಲಾಖೆ ಇದೀಗ ಮೊಟ್ಟೆಗಳ ರಕ್ಷಣೆಗೆ ಮುಂದಾಗಿದ್ದು ಮೊಟ್ಟೆಗಳ ಕುರಿತು ಮಾಹಿತಿ ನೀಡಿದಲ್ಲಿ ಬಹುಮಾನ ನೀಡುವ ಮೂಲಕ ಸ್ಥಳೀಯರಿಂದಲೂ ಸಹಕಾರ ಪಡೆದುಕೊಳ್ಳುತ್ತಿದೆ.
ಇದನ್ನೂಓದಿ:ಬಾಗಲಕೋಟೆಯಲ್ಲಿ ಯೋಗಥಾನ್: 15 ಸಾವಿರ ವಿದ್ಯಾರ್ಥಿಗಳು ಭಾಗಿ - ಡ್ರೋನ್ ಕ್ಯಾಮರಾದಲ್ಲಿ ಸೆರ