ಕಾರವಾರ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಬಳಿಕ ಟೋಲ್ ಸಂಗ್ರಹಣೆ ಮಾಡೋದು ಕಾಮನ್. ರಸ್ತೆ ನಿರ್ಮಾಣಕ್ಕೆ ತಗುಲಿದ ವೆಚ್ಚವನ್ನು ಹೆದ್ದಾರಿ ನಿರ್ಮಾಣ ಮಾಡಿದ ಕಂಪೆನಿ ಟೋಲ್ ವಿಧಿಸುವ ಮೂಲಕ ವಾಹನ ಸವಾರರಿಂದ ಸಂಗ್ರಹಣೆ ಮಾಡುತ್ತದೆ. ಆದರೆ, ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರ ಹೆದ್ದಾರಿ ಪೂರ್ಣಗೊಳ್ಳುವ ಮೊದಲೇ ತರಾತುರಿಯಲ್ಲಿ ಟೋಲ್ ಸಂಗ್ರಹಣೆ ಮಾಡುತ್ತಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಾದ ಭಟ್ಕಳ ಗಡಿಯಿಂದ ಕಾರವಾರ ತಾಲೂಕಿನ ಗೋವಾ ಗಡಿಭಾಗವಾದ ಮಾಜಾಳಿವರೆಗೆ ರಾಷ್ಟ್ರೀಯ ಹೆದ್ದಾರಿ 66ರನ್ನು ಚತುಷ್ಪಥಕ್ಕೇರಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಹೆದ್ದಾರಿ ಅಗಲೀಕರಣ ಜವಬ್ದಾರಿ ಹೊತ್ತಿರುವ ಐಆರ್‌ಬಿ ಕಂಪೆನಿ ಒಟ್ಟು 173 ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ಇದುವರೆಗೆ ಸುಮಾರು 110 ಕಿಲೋ ಮೀಟರ್ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಆದರೆ, ಅರೆಬರೆ ಕಾಮಗಾರಿ ನಡುವೆಯೂ ಕುಮಟಾ ತಾಲೂಕಿನ ಹೊಳೆಗದ್ದೆ ಹಾಗೂ ಅಂಕೋಲಾ ತಾಲೂಕಿನ ಬೆಲೆಕೇರಿ ಬಳಿಯ ಟೋಲ್ ಸಂಗ್ರಹಣಾ ಕೇಂದ್ರದಲ್ಲಿ ಸೋಮವಾರ ತಡರಾತ್ರಿಯಿಂದಲೇ ಟೋಲ್ ವಸೂಲಾತಿಗೆ ಇಳಿದಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಉತ್ತರಕನ್ನಡ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ 60 ಕಿಲೋ ಮೀಟರ್ಗೆ ಒಂದರಂತೆ ಎರಡು ಟೋಲ್ ಸಂಗ್ರಹಣಾ ಕೇಂದ್ರಗಳನ್ನು ತೆರೆಯಲಾಗಿದ್ದು, ಫೆಬ್ರುವರಿ 9ರ ಮಧ್ಯರಾತ್ರಿಯಿಂದಲೇ ಟೋಲ್ ಸಂಗ್ರಹಣೆ ಪ್ರಾರಂಭಿಸೋದಾಗಿ ಐಆರ್‌ಬಿ ಕಂಪನಿ ತಿಳಿಸಿತ್ತು. ಆದರೆ, ಹೆದ್ದಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕನ್ನಡಪರ ಸಂಘಟನೆಗಳು ಕಾಮಗಾರಿ ಪೂರ್ಣಗೊಂಡ ಬಳಿಕವೇ ಟೋಲ್ ಸಂಗ್ರಹಿಸುವಂತೆ ಮತ್ತು ಸ್ಥಳೀಯವಾಗಿ ಸಂಚರಿಸುವ ಜಿಲ್ಲೆಯ ವಾಹನ ಸವಾರರಿಗೆ ಟೋಲ್ ವಿನಾಯಿತಿ ನೀಡುವಂತೆ ಆಗ್ರಹಿಸಿದ್ದರು. ಇಷ್ಟಾದರೂ ಟೋಲ್ ಸಂಗ್ರಹ ಪ್ರಾರಂಭವಾಗಿ ಸ್ಥಳೀಯರಿಂದಲೂ ಟೋಲ್ ವಸೂಲಾತಿ ಮಾಡುತ್ತಿರುವುದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದ್ರೆ 75% ಶೇಕಡಾ ಹೆದ್ದಾರಿ ನಿರ್ಮಾಣವಾದ ಬಳಿಕ ಟೋಲ್ ಸಂಗ್ರಹಣೆಗೆ ಕಾನೂನಾತ್ಮಕವಾಗಿ ಅವಕಾಶವಿದ್ದು, ಸ್ಥಳೀಯರಿಗೆ ವಿನಾಯಿತಿ ನೀಡುವ ಸಂಬಂಧ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಐಆರ್‌ಬಿ ಕಂಪೆನಿ ಅಧಿಕಾರಿಗಳಿಗೆ ಸೂಚನೆ ನೀಡಿರೋದಾಗಿ ತಿಳಿಸಿದ್ದಾರೆ. ಅರೆಬರೆ ಕಾಮಗಾರಿ ನಡುವೆಯೂ ಮತ್ತು ಸ್ಥಳೀಯ ವಾಹನ ಸವಾರರಿಗೂ ಟೋಲ್ ಸಂಗ್ರಹಿಸಿದ್ದರಿಂದಲೇ ಕನ್ನಡಪರ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿದ್ದು ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.