ಕಾರವಾರ: ಬಲೆ ಹಾಕಿ ಹಿಡಿದಿದ್ದ ಕಾಡು ಮೊಲವನ್ನು ಕತ್ತರಿಸುತ್ತಿದ್ದಾಗ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಜೊಯಿಡಾ ತಾಲೂಕಿನ ಕ್ಯಾಸಲ್ ರಾಕ್ ಶಾಖೆಯ ಕಲಂಬುಳಿ ಬಳಿ ನಡೆದಿದೆ.
ಜೊಯಿಡಾ ತಾಲೂಕಿನ ಅಮೃತಪಾಲಿಯ ಕೃಷ್ಣಾ ಲಕ್ಷ್ಮ ನಾಯ್ಕ, ತಮ್ಮಣ್ಣ ಸೋಮಾ ಮಿರಾಶಿ, ಸಂತೋಷ ಶಂಕರ್ ಮಿರಾಶಿ ಬಂಧಿತ ಆರೋಪಿಗಳು. ಫೆ. 4ರಂದು ಕ್ಯಾಸಲ್ ರಾಕ್ ವನ್ಯಜೀವಿ ವಲಯದ ಕಲಂಬುಳಿ ಬಳಿ ಬೇಲಿ ಹಾಕಿ ಬೇಲಿಗೆ ತಂತಿಯ ನೇಣು ಬಿಗಿದಿದ್ದರು. ಶುಕ್ರವಾರ ಬಲೆಗೆ ಕಾಡು ಮೊಲ ಬಿದ್ದಿದ್ದು, ಆರೋಪಿಗಳು ಬೆಳಗ್ಗೆ ಮೊಲವನ್ನು ಅಲ್ಲೇ ಹತ್ತಿರದ ನಾಲೆ ಕೊಂಡೊಯ್ದು ಕತ್ತರಿಸುತ್ತಿದ್ದರು.
ಓದಿ: ಕಾರವಾರ: ಕಾಡಿನಲ್ಲಿ ಗೋಚರಿಸುತ್ತಿದ್ದ ಬೆಳಕು... ನಿಗೂಢ ರಹಸ್ಯ ಬಯಲಿಗೆಳೆದ ಅರಣ್ಯಾಧಿಕಾರಿಗಳು!
ಆದರೆ ಇದೇ ವೇಳೆಗೆ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಇದನ್ನು ಗಮನಿಸಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ದಾಂಡೇಲಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಕ್ಯಾಸಲ್ ರಾಕ್ ವಲಯ ಅರಣ್ಯಾಧಿಕಾರಿ ಎಂ.ಎಸ್.ಕಳ್ಳಿಮಠ, ಉಪವಲಯ ಅರಣ್ಯಾಧಿಕಾರಿ ಸತೀಶ ಎಸ್., ಅರಣ್ಯ ರಕ್ಷಕ ಲಿಂಗರಾಜ್ ಗೌಡ ಪಾಲ್ಗೊಂಡಿದ್ದರು.