ಕಾರವಾರ(ಉತ್ತರ ಕನ್ನಡ): ಪಾನ್ ಕಾರ್ಡ್ ಅಪ್ಡೇಟ್ ಮಾಡಬೇಕು ಎಂದು ಮಹಿಳೆಯೊಬ್ಬರು ಬ್ಯಾಂಕ್ ಖಾತೆಯಿಂದ 3.24 ಲಕ್ಷ ರೂ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ ತಕ್ಷಣ ಪೊಲೀಸರು ಹಣ ವರ್ಗಾವಣೆಗೆ ಬ್ಯಾಂಕ್ ಮೂಲಕ ತಡೆ ಹಿಡಿದ ಹಿನ್ನೆಲೆಯಲ್ಲಿ ಮಹಿಳೆಗೆ 3 ಲಕ್ಷ ರೂ. ವಾಪಸ್ ಬಂದಿದೆ.
ಕಳೆದ ಅಕ್ಟೋಬರ್ ಕೊನೆಯ ವಾರ ಕಾರವಾರ ನಗರದ ನಿವಾಸಿ ವಿದ್ಯಾ ಕಾಮತ್ ಅವರು 3.24 ಲಕ್ಷ ರೂ. ಸೈಬರ್ ವಂಚನೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಅವರು ತಮ್ಮ ಚಿಕ್ಕಮ್ಮನ ಎಸ್ಬಿಐ ಬ್ಯಾಂಕ್ ಖಾತೆಯನ್ನು ನಿರ್ವಹಿಸುತ್ತಿದ್ದರು. ಪಾನ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಎಂದು ಬಂದ ಎಸ್ಎಂಎಸ್ ಲಿಂಕ್ನಲ್ಲಿ ಖಾತೆಯ ಎಲ್ಲ ಮಾಹಿತಿ ನಮೂದಿಸಿದ್ದರು. ಬಳಿಕ ಅವರ ಚಿಕ್ಕಮ್ಮನ ಖಾತೆಯಿಂದ 99 ಸಾವಿರ ರೂ.ನಂತೆ ಮೂರು ಬಾರಿ ಹಾಗೂ ಒಮ್ಮೆ 24 ಸಾವಿರ ರೂ. ಇನ್ನೊಂದು ಖಾತೆಗೆ ವರ್ಗಾವಣೆಯಾಗಿತ್ತು.
ಈ ಕುರಿತು ವಿದ್ಯಾ ಅವರು ಕಾರವಾರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಹಣ ವರ್ಗಾವಣೆಯಾದ ಖಾತೆಯನ್ನು ತಡೆ ಹಿಡಿದಿದ್ದಾರೆ. ನಂತರ ಮಹಿಳೆಯ 3 ಲಕ್ಷ ರೂ. ಹಣವನ್ನು ಮರಳಿ ಅವರ ಖಾತೆಗೆ ವರ್ಗಾಯಿಸಲಾಗಿದೆ. ಇನ್ನುಳಿದ 24 ಸಾವಿರ ರೂ. ಹಾಗೂ ಆರೋಪಿಗಾಗಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಲಂಚ ಸ್ವೀಕರಿಸಿದ ಐವರು ಪಿಡಿಒಗಳ ಅಮಾನತು